ADVERTISEMENT

ಅಲ್ಪಸಂಖ್ಯಾತರ ಓಲೈಕೆಗೆ ಕಾಂಗ್ರೆಸ್‌ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ: BYV

​ಪ್ರಜಾವಾಣಿ ವಾರ್ತೆ
Published 31 ಮೇ 2025, 11:20 IST
Last Updated 31 ಮೇ 2025, 11:20 IST
<div class="paragraphs"><p>BYV</p></div>

BYV

   

ಮಂಡ್ಯ: ‘ಮುಸ್ಲಿಂ ಯುವಕರ ಹತ್ಯೆ ಮುಂದಿಟ್ಟುಕೊಂಡು, ಕಾಂಗ್ರೆಸ್‌ ಫುಡಾರಿಗಳ ಕುಮ್ಮಕ್ಕಿನಿಂದ ಹಿಂದುತ್ವ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ. ಇದು ಮುಂದುವರಿದರೆ ಪರಿಸ್ಥಿತಿ ಕೈ ಮೀರಲಿದೆ. ಅದಕ್ಕೆ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ, ಗೃಹಸಚಿವರು ಹೊಣೆಯಾಗುತ್ತಾರೆ. ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿರುವ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದರು. 

ನಗರದಲ್ಲಿ ಶನಿವಾರ ಬಸವ ಜಯಂತಿ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ‘ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಪೊಲೀಸರು ಅತಿರೇಕದ ವರ್ತನೆ ತೋರುತ್ತಿದ್ದಾರೆ. ಹಿಂದುತ್ವ ಕಾರ್ಯಕರ್ತರನ್ನು ಗುರಿಯಾಗಿಸಿಕೊಳ್ಳಲು ಕೋಮು ನಿಗ್ರಹ ದಳವನ್ನು ಸರ್ಕಾರ ಸ್ಥಾಪನೆ ಮಾಡಿದೆ. ಇದು ಶೋಭೆ ತರುವುದಿಲ್ಲ. ಸುಹಾಸ್ ಶೆಟ್ಟಿ ಹತ್ಯೆಗೆ ಹೊರ ದೇಶದಿಂದಲೂ ಹಣ ಬಂದಿದೆ ಎನ್ನಲಾಗುತ್ತಿದೆ. ಆದರೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಹೇಮಾವತಿ ಲಿಂಕ್ ಕೆನಲ್‌ ವಿರೋಧಿಸಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ತುಮಕೂರು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೂ ಹೇಮಾವತಿ ನೀರು ಸಿಗಬೇಕು ಮತ್ತು ರೈತರಿಗೆ ನ್ಯಾಯ ಸಿಗಬೇಕು ಎಂಬುದು ಬಿಜೆಪಿ ಬೇಡಿಕೆ. ಆದರೆ, ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ. ರೈತರ ಹೋರಾಟವನ್ನು ಹತ್ತಿಕ್ಕುವುದಕ್ಕೆ ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ. ಜನರು ಕೂಡ ಎಚ್ಚೆತ್ತುಕೊಂಡಿದ್ದಾರೆ. ಮುಂದಿನ ದಿನದಲ್ಲಿ ಹೋರಾಟ ತೀವ್ರವಾಗಲಿದೆ’ ಎಂದರು. 

ಬಡವರಿಗೆ ಸಿಗದ ಔಷಧ: ಮಂಡ್ಯದಲ್ಲಿ ಪೊಲೀಸರ ತಪಾಸಣೆ ವೇಳೆ ಮಗು ಸಾವು ಪ್ರಕರಣಕ್ಕೆ ಪ್ರತಿಕ್ರಿಯಿಸಿ, ‘ಪೊಲೀಸರಿಂದ ಮಗು ಸಾವಾಗಿದ್ದು, ನಮ್ಮ ಶತ್ರುಗಳಿಗೂ ಆ ಪರಿಸ್ಥಿತಿ ಬರಬಾರದು. ಆಸ್ಪತ್ರೆಯಲ್ಲಿ ನಾಯಿ ಕಚ್ಚಿರುವುದಕ್ಕೆ ಔಷಧ ಸಿಗುತ್ತಿಲ್ಲ. ಮತ್ತೊಂದು ಕಡೆ ಆಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರಗಳನ್ನು ಮುಚ್ಚಿಸುತ್ತಿದ್ದಾರೆ. ಬಡವರಿಗೆ ಯೋಜನೆ ತಲುಪದಂತೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಸೇಡಿನ ರಾಜಕಾರಣ ಮಾಡುತ್ತಿದೆ’ ಎಂದು ಆರೋಪಿಸಿದರು. 

ಗ್ಯಾರಂಟಿ ಹಣಕ್ಕಾಗಿ ರಾಜ್ಯ ಸರ್ಕಾರ ಪೊಲೀಸ್‌ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಿಗೆ ಟಾರ್ಗೆಟ್‌ ನೀಡಿದೆ. ಹಣದ ಕಲೆಕ್ಷನ್‌ ಎಲ್ಲ ಕಡೆ ನಡೆಯುತ್ತಿದೆ. ಚುನಾವಣೆ ಬಂದರೆ ಕಾಂಗ್ರೆಸ್ ಹೀನಾಯವಾಗಿ ಸೋಲೋದು ನಿಶ್ಚಿತ ಎಂದು ವರದಿ ಬಂದಿದೆ. ಬಡವರ ವಿರೋಧಿ ಸರ್ಕಾರ ತೊಲಗಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.