ADVERTISEMENT

ಕಾಂಗ್ರೆಸ್ ಪಕ್ಷ ದುರ್ಬಲ: ಭಿನ್ನರ ಆತಂಕ

ಜಮ್ಮುವಿನಲ್ಲಿ ಒಂದೇ ವೇದಿಕೆಯಲ್ಲಿ ನಾಯಕರು– ಪಕ್ಷ ಬಲವರ್ಧನೆಗೆ ಪಣ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 19:11 IST
Last Updated 27 ಫೆಬ್ರುವರಿ 2021, 19:11 IST
ಜಮ್ಮುವಿನಲ್ಲಿ ಶನಿವಾರ ನಡೆದ ಶಾಂತಿ ಸಮ್ಮೇಳನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಕಪಿಲ್ ಸಿಬಲ್, ಭೂಪಿಂದರ್ ಸಿಂಗ್ ಹೂಡ ಹಾಗೂ ರಾಜ್ ಬಬ್ಬರ್ ಅವರು ಕೇಸರಿ ಪೇಟ ತೊಟ್ಟಿದ್ದರು –ಪಿಟಿಐ ಚಿತ್ರ
ಜಮ್ಮುವಿನಲ್ಲಿ ಶನಿವಾರ ನಡೆದ ಶಾಂತಿ ಸಮ್ಮೇಳನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಕಪಿಲ್ ಸಿಬಲ್, ಭೂಪಿಂದರ್ ಸಿಂಗ್ ಹೂಡ ಹಾಗೂ ರಾಜ್ ಬಬ್ಬರ್ ಅವರು ಕೇಸರಿ ಪೇಟ ತೊಟ್ಟಿದ್ದರು –ಪಿಟಿಐ ಚಿತ್ರ   

ಜಮ್ಮು: ‘ಪಕ್ಷದಲ್ಲಿ ನಾಯಕತ್ವ ಹಾಗೂ ಸಂಘಟನೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು’ ಎಂದು ದನಿ ಎತ್ತಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್, ಆನಂದ ಶರ್ಮಾ ಮೊದಲಾದವರು ಇಲ್ಲಿ ಶನಿವಾರ ಒಟ್ಟಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ‘ಪಕ್ಷ ದುರ್ಬಲಗೊಳ್ಳುತ್ತಿದ್ದು, ಅದನ್ನು ಬಲಪಡಿಸುವ ಸಲುವಾಗಿ ಒಗ್ಗಟ್ಟಾಗಿದ್ದೇವೆ’ ಎಂದು ನಾಯಕರು ಸಂದೇಶ ರವಾನಿಸಿದರು.

ಗುಲಾಂ ನಬಿ ಅವರ ಎನ್‌ಜಿಒ ಗ್ಲೋಬಲ್ ಗಾಂಧಿ ಫ್ಯಾಮಿಲಿ ‘ಶಾಂತಿ ಸಮ್ಮೇಳನ’ ಕಾರ್ಯಕ್ರಮ ಆಯೋಜಸಿತ್ತು.

‘ನಾನು ಸತ್ಯವನ್ನು ನುಡಿಯುತ್ತೇನೆ. ನಾವು ಇಲ್ಲಿ ಒಟ್ಟುಗೂಡಿರುವ ಕಾರಣವೇನೆಂದರೆ ಕಾಂಗ್ರೆಸ್ ದುರ್ಬಲಗೊಳ್ಳುತ್ತಿದೆ ಎಂಬ ಸತ್ಯವನ್ನು ತಿಳಿಸಲು. ನಾವು ಮೊದಲೇ ಒಂದೆಡೆ ಸೇರಿದ್ದೂ ಸಹ ಕಾಂಗ್ರೆಸ್ ಅನ್ನು ಬಲಪಡಿಸಬೇಕು ಎಂಬ ಉದ್ದೇಶದಿಂದಲೇ’ ಎಂದು ಸಿಬಲ್ ಹೇಳಿದರು.

ADVERTISEMENT

ಭೂಪಿಂದರ್ ಸಿಂಗ್ ಹೂಡಾ, ಮನೀಶ್ ತಿವಾರಿ, ವಿವೇಕ್ ತಂಕಾ, ರಾಜ್‌ ಬಬ್ಬರ್ ಮೊದಲಾದವರು ಉಪಸ್ಥಿತ
ರಿದ್ದರು. ಪಕ್ಷದ ವಿರುದ್ಧ ಕಳೆದ ವರ್ಷ ಅಸಮಾಧಾನ ವ್ಯಕ್ತಪಡಿಸಿದ್ದ 23 ನಾಯಕರ ಗುಂಪನ್ನು ‘ಜಿ–23’ಎಂದು ಕರೆಯಲಾಗಿತ್ತು. ಸೋನಿಯಾ ಅವರಿಗೆ ಪತ್ರ ಬರೆದಿದ್ದ ಈ ಗುಂಪು, ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರನ್ನು ನೇಮಿಸುವಂತೆ ಒತ್ತಾಯಿಸಿತ್ತು.

‘ನಾನು ಮೇಲ್ಮನೆಯಿಂದ ನಿವೃತ್ತನಾಗಿದ್ದೇನೆಯೇ ಹೊರತು ರಾಜಕೀಯದಿಂದ ಅಲ್ಲ’ ಎಂದು ಗುಲಾಂ ನಬಿ ಆಜಾದ್ ಹೇಳಿದರು.

‘ಇಲ್ಲಿರುವ ಯಾವ ನಾಯಕರೂ ವಾಮಮಾರ್ಗದಿಂದ ಪಕ್ಷಕ್ಕೆ ಬಂದವರಲ್ಲ. ನಾವು ಕಾಂಗ್ರೆಸ್ಸಿಗರು ಹೌದೇ– ಅಲ್ಲವೇ ಎಂದು ಹೇಳುವ ಹಕ್ಕನ್ನು ನಾನು ಯಾರಿಗೂ ಕೊಟ್ಟಿಲ್ಲ. ನಾವು ಪಕ್ಷಕ್ಕಾಗಿ ರಕ್ತ– ಬೆವರು ಹರಿಸಿದ್ದೇವೆ. ಮುಂದೆಯೂ ಪಕ್ಷವನ್ನು ಕಟ್ಟುತ್ತೇವೆ, ಅದನ್ನು ಬಲಪಡಿಸುತ್ತೇವೆ. ಕಾಂಗ್ರೆಸ್ ಒಗ್ಗೂಡಿದಾಗ ಅದು ದೇಶದ ಸ್ಥೈರ್ಯವನ್ನೂ ಹೆಚ್ಚಿಸುತ್ತದೆ’ ಎಂದು ಆನಂದ್ ಶರ್ಮಾ ಹೇಳಿದ್ದಾರೆ.

ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಪುದುಚೇರಿ ಚುನಾವಣೆಗಳ ಹೊಸ್ತಿಲಲ್ಲಿ, ಇದೇ ಮೊದಲ ಬಾರಿಗೆ ಭಿನ್ನಮತೀಯರು ಒಟ್ಟಾಗಿ ಪಕ್ಷದ ನಾಯಕತ್ವದ ವಿರುದ್ಧ ಸಾರ್ವಜನಿಕವಾಗಿ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ.

‘ಒಂದು ಸಂಸ್ಥೆಯು ನಿಮಗೆ ಕಚೇರಿ ನೀಡಬಹುದು. ಕಾಂಗ್ರೆಸ್ ನಿಮ್ಮನ್ನು ಪದಾಧಿಕಾರಿಗಳನ್ನಾಗಿ ಮಾಡಬಹುದು ಆದರೆ, ಪ್ರತಿ ಪದಾಧಿಕಾರಿಯೂ ನಾಯಕನಾಗಲು ಸಾಧ್ಯವಿಲ್ಲ. ಜನರಿಂದ ಗುರುತಿಸಲ್ಪಟ್ಟ ಕೆಲವರು ಮಾತ್ರ ನಾಯಕರಾಗಿ ಬೆಳೆಯುತ್ತಾರೆ’ ಎಂದು ಶರ್ಮಾ ಹೇಳಿದರು.

‘ದೇಶದ ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್ ಬಲಗೊಳ್ಳಬೇಕೆಂದು ನಾವು ಬಯಸುತ್ತೇವೆ. ಏಕೆಂದರೆ ಕಾಂಗ್ರೆಸ್ ದುರ್ಬಲವಾಗಿದ್ದರೆ ರಾಷ್ಟ್ರ ದುರ್ಬಲವಾಗಿರುತ್ತದೆ. ರಾಷ್ಟ್ರ ಮತ್ತು ಪಕ್ಷವನ್ನು ಸದೃಢ ವಾಗಿಸಲು ಅಗತ್ಯವಾದದ್ದನ್ನು ನಾವು ಮಾಡುತ್ತೇವೆ’ ಎಂದು ಕಪಿಲ್ ಸಿಬಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.