
ನವದೆಹಲಿ: ಕೇರಳ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್‌ನ ಉನ್ನತ ನಾಯಕರು ಕೇರಳ ರಾಜ್ಯ ಘಟಕದ ನಾಯಕರೊಂದಿಗೆ ಶುಕ್ರವಾರ ಇಲ್ಲಿ ಮಹತ್ವದ ಸಭೆ ನಡೆಸಿದರು. ಸಂಸದ ಶಶಿ ತರೂರ್ ಅವರು ಸಭೆಗೆ ಗೈರಾದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪಾಲ್ಗೊಂಡರು.
ಪಕ್ಷದ ರಾಜ್ಯ ಘಟಕದ ನಾಯಕರು ತಮ್ಮನ್ನು ಪದೇ ಪದೇ ಕಡೆಗಣಿಸಲು ಪ್ರಯತ್ನಿಸಿರುವುದಕ್ಕೆ ಅಸಮಾಧಾನಗೊಂಡಿರುವ ಹಿರಿಯ ನಾಯಕ ತರೂರ್ ಸಭೆಯಿಂದ ಹೊರಗುಳಿದರು ಎಂದು ಮೂಲಗಳು ತಿಳಿಸಿವೆ.
ಜನವರಿ 19ರಂದು ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ಕೇರಳದ ಇತರ ನಾಯಕರ ಹೆಸರು ಉಲ್ಲೇಖಿಸಿದ್ದರು. ಆದರೆ ವೇದಿಕೆಯಲ್ಲಿದ್ದ ತರೂರ್ ಅವರ ಹೆಸರನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿರಲಿಲ್ಲ. ಈ ಬೆಳವಣಿಗೆಯಿಂದಲೂ ಅವರು ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಆದರೆ ತರೂರ್ ಅಸಮಾಧಾನಗೊಂಡಿದ್ದಾರೆ ಎಂಬ ವರದಿಯನ್ನು ಕಾಂಗ್ರೆಸ್ ಅಲ್ಲಗಳೆದಿದೆ. ‘ಕೋಯಿಕ್ಕೋಡ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವುದರಿಂದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ತರೂರ್ ಅವರ ಕಚೇರಿ ತಿಳಿಸಿದೆ ಎಂದಿದೆ.
ಪಕ್ಷದ ಕೇರಳ ಉಸ್ತುವಾರಿ ದೀಪಾ ದಾಸ್‌ಮುನ್ಶಿ, ಕೇರಳ ಚುನಾವಣೆ ಉಸ್ತುವಾರಿಗಳಾದ ಸಚಿನ್ ಪೈಲಟ್ ಮತ್ತು ಕೆ.ಜೆ ಜಾರ್ಜ್, ಹಿರಿಯ ನಾಯಕರಾದ ರಮೇಶ್ ಚೆನ್ನಿತ್ತಲ, ವಿ.ಡಿ.ಸತೀಶನ್ ಮತ್ತು ಸನ್ನಿ ಜೋಸೆಫ್ ಅವರು ಸಭೆಯಲ್ಲಿ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.