ADVERTISEMENT

ಪ್ರಧಾನಿ ಮೋದಿ ನೆಲದಲ್ಲಿ ಕಾಂಗ್ರೆಸ್‌ ಮುಖಂಡರ ಸಭೆ; ಚುನಾವಣಾ ಪ್ರಚಾರಕ್ಕೆ ಚಾಲನೆ

ಏಜೆನ್ಸೀಸ್
Published 12 ಮಾರ್ಚ್ 2019, 8:39 IST
Last Updated 12 ಮಾರ್ಚ್ 2019, 8:39 IST
   

ಅಹಮದಾಬಾದ್‌: ಇಲ್ಲಿನ ಸಾಬರಮತಿ ಆಶ್ರಮದಲ್ಲಿ ಕಾಂಗ್ರೆಸ್‌ನ ಪ್ರಮುಖ ಮುಖಂಡರು ಮಹಾತ್ಮ ಗಾಂಧಿಗೆ ಗೌರವ ಸೂಚಿಸಿದರು. 58 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಗುಜರಾತ್‌ನಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗಿದೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮಹಾತ್ಮನಿಗೆನಮಿಸಿದರು. ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷ ಅಧಿಕೃತ ಪ್ರಚಾರ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ತವರಿನಿಂದಲೇ ಪ್ರಾರಂಭಿಸುತ್ತಿರುವುದು ಗಮನ ಸೆಳೆದಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮುಖಂಡರಾದ ಎ.ಕೆ.ಆಂಟನಿ, ಗುಲಾಮ್‌ ನಬಿ ಆಜಾದ್‌, ಅಹ್ಮದ್‌ ಪಟೇಲ್‌, ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೊಟ್‌, ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಘೇಲ್‌, ಪುದುಚೆರಿ ಸಿಎಂ ವಿ.ನಾರಾಯಣಸಾಮಿ, ತರುಣ್‌ ಗೊಗೊಯಿ, ಹರೀಶ್ ರಾವತ್‌ ಸೇರಿದಂತೆ ಹಲವು ಮುಖಂಡರು ಸಾಬರಮತಿ ಆಶ್ರಮದ ಪ್ರಾರ್ಥನೆ ಸಭೆಯಲ್ಲಿ ಭಾಗಿಯಾದರು.

ADVERTISEMENT

ಸೋಮವಾರ ದೆಹಲಿಯ ಕಾಂಗ್ರೆಸ್‌ ಬೂತ್‌ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್‌ ಗಾಂಧಿ, ಮುಂಬರುವ ಸಾರ್ವತ್ರಿಕ ಚುನಾವಣೆ ಮಹಾತ್ಮ ಗಾಂಧಿಯ ಭಾರತ ಹಾಗೂ ನಾತೂರಾಮ್‌ ಗೋಡ್ಸೆಯ ಭಾರತದ ನಡುವಿನ ಕದನ ಎಂದು ಘೋಷಿಸಿದ್ದರು.

1930ರ ಮಾರ್ಚ್‌ 12ರಂದು ಮಹಾತ್ಮ ಗಾಂಧಿ ಸಾಬರಮತಿ ಆಶ್ರಮದಿಂದ ಸತ್ಯಾಗ್ರಹಿಗಳೊಂದಿಗೆ ದಂಡಿ ಯಾತ್ರೆ(ಉಪ್ಪಿನ ಸತ್ಯಾಗ್ರಹ) ಪ್ರಾರಂಭಿಸಿದ್ದರು. ಬ್ರಿಟಿಷರು ಉಪ್ಪಿನ ಮೇಲೆ ಹೇರಿದ್ದ ಹಲವು ನಿರ್ಬಂಧ, ನೀತಿಗಳ ವಿರುದ್ಧ ಗಾಂಧೀಜಿ ಶಾಂತಿಯುತ ಹೋರಾಟ ನಡೆಸಿದ್ದರು. ಈ ಬಗ್ಗೆ ಕಾಂಗ್ರೆಸ್ ಟ್ವೀಟ್‌ ಮಾಡಿದೆ.

ಪ್ರಿಯಾಂಕಾ ಗಾಂಧಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿದ ನಂತರದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ನ ಅಧಿಕೃತ ಕಾರ್ಯಕಾರಿ ಸಮಿತಿ ಸಭೆಯಾಗಿದೆ. ವಲ್ಲಭಭಾಯಿ ಪಟೇಲ್‌ ರಾಷ್ಟ್ರೀಯ ಸ್ಮಾರಕ ಸ್ಥಳದಲ್ಲಿ ಸಭೆ ನಡೆಯುತ್ತಿದ್ದು, ಲೋಕಸಭಾ ಚುನಾವಣೆಗೆ ಕೈಗೊಳ್ಳಲಾಗಿರುವ ಯೋಜನೆಗಳಿಗೆ ಅಂತಿಮ ರೂಪ ಸಿಗಲಿದೆ.

‘ಜನ ಸಂಕಲ್ಪ ರ್‍ಯಾಲಿ’ ಮೂಲಕ ಗುಜರಾತ್‌ನಿಂದ ಕಾಂಗ್ರೆಸ್‌ ಚುನಾವಣಾ ಪ್ರಚಾರದ ಕಹಳೆ ಮೊಳಗಿಸಲಿದೆ. ಮಹಾತ್ಮ ಗಾಂಧಿ ಹಾಗೂ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ನೆಲದಲ್ಲಿ ಪಕ್ಷದ ಪ್ರಮುಖ ಸಭೆ ನಡೆಸಿ, ಚುನಾವಣಾ ಪ್ರಚಾರ ಆರಂಭಿಸುವ ಮೂಲಕ ಪ್ರಬಲ ರಾಜಕೀಯ ಸಂದೇಶವನ್ನು ನೀಡುವ ಪ್ರಯತ್ನ ಎನ್ನಲಾಗಿದೆ. 1961ರಲ್ಲಿ ಭಾವನಗರದಲ್ಲಿ ಕೊನೆಯ ಬಾರಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.