ದೆಹಲಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪಿ.ಚಿದಂಬರಂ ಮಾತನಾಡಿದರು. ಸುಪ್ರಿಯಾ ಶ್ರೀನಾಥೆ ಹಾಗೂ ಟಿ.ಎಸ್.ಸಿಂಗ್ ದೇವ್ ಇದ್ದಾರೆ.
ಪಿಟಿಐ ಚಿತ್ರ
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆ ಹೇಗಿರಬೇಕು ಎಂಬುದರ ಕುರಿತು ಸಾರ್ವಜನಿಕರ ಸಲಹೆಗಳನ್ನು ಸ್ವೀಕರಿಸಲು ಕಾಂಗ್ರೆಸ್ ಪಕ್ಷವು ಅಂತರ್ಜಾಲ ತಾಣ (awaazbharatki.in) ಮತ್ತು ಇ–ಮೇಲ್ ವಿಳಾಸವನ್ನು (awaazbharatki@inc.in) ಬುಧವಾರ ತೆರೆದಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾಂಗ್ರೆಸ್ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಪಿ.ಚಿದಂಬರಂ, ‘ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆ ಸಿದ್ಧಪಡಿಸಲು ಸಾರ್ವಜನಿಕರ ಸಲಹೆಗಳನ್ನು ಸ್ವೀಕರಿಸಲಿದೆ. ಹೀಗಾಗಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆಯು ‘ಜನರ ಪ್ರಣಾಳಿಕೆ’ಯಾಗಿರಲಿದೆ’ ಎಂದಿದ್ದಾರೆ.
‘ಪ್ರಣಾಳಿಕೆಯ ಸಿದ್ಧತೆಯಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕರೂ ಪಾಲ್ಗೊಳ್ಳಬೇಕು ಎಂಬುದು ನಮ್ಮ ಅಪೇಕ್ಷೆ. ಹಲವು ಸ್ತರಗಳಲ್ಲಿನ ಜನರು ಪಕ್ಷಕ್ಕೆ ಸೂಕ್ತ ಸಲಹೆಗಳನ್ನು ನೀಡುವ ಭರವಸೆ ಇದೆ. ಈ ‘ಜನ ಪ್ರಣಾಳಿಕೆ’ಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂಬುದು ನಮ್ಮ ಮನವಿ’ ಎಂದಿದ್ದಾರೆ.
‘ಪ್ರತಿ ರಾಜ್ಯದಲ್ಲೂ ಕನಿಷ್ಠ ಒಂದು ಸಮಾಲೋಚನಾ ಸಭೆ ನಡೆಸಲಾಗುವುದು. ಕೆಲವು ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಸಮಾವೇಶ ನಡೆಸಲಾಗುವುದು’ ಎಂದು ಚಿದಂಬರಂ ಹೇಳಿದ್ದಾರೆ.
ಈ ಸಮಾವೇಶಗಳಲ್ಲಿ ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳು ಪಾಲ್ಗೊಳ್ಳಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಚಿದಂಬರಂ, ‘ಸಮಾವೇಶದಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು. ಆದರೆ ಪ್ರಣಾಳಿಕೆ ಸಿದ್ಧತೆಯಲ್ಲಿ ಯಾರು ಪಾಲ್ಗೊಳ್ಳಬಹುದು ಎಂಬುದನ್ನು ಪಕ್ಷದ ಮುಖ್ಯಸ್ಥರೇ ನಿರ್ಧರಿಸುತ್ತಾರೆ’ ಎಂದಿದ್ದಾರೆ.
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥೆ, ಪ್ರಣಾಳಿಕೆ ರಚನಾ ಸಮಿತಿ ಸಂಚಾಲಕ ಟಿ.ಎಸ್.ಸಿಂಗ್ ದೇವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.