ನವದೆಹಲಿ: ಪಾಕಿಸ್ತಾನ– ಚೀನಾ ದೇಶಗಳ ಸವಾಲುಗಳನ್ನು ಎದುರಿಸಲು ಸಮಗ್ರ ರಾಷ್ಟ್ರೀಯ ಮಿಲಿಟರಿ ಸಿದ್ಧಾಂತ ರೂಪಿಸುವಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರು ಸೋಮವಾರ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಾಕಿಸ್ತಾನ ವಿರುದ್ಧದ ಸಂಘರ್ಷದಲ್ಲಿ ದೇಶದ ಸಶಸ್ತ್ರ ಪಡೆಗಳು ಮೇಲುಗೈ ಸಾಧಿಸುತ್ತಿದ್ದ ವೇಳೆಯಲ್ಲಿ ‘ಆಪರೇಷನ್ ಸಿಂಧೂರ’ ಅನ್ನು ದಿಢೀರನೆ ನಿಲ್ಲಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ನಿರ್ಧಾರದಿಂದ ಸಾಧಿಸಲಾದ ಕಾರ್ಯತಂತ್ರ, ಸೇನೆ ಮತ್ತು ರಾಜಕೀಯ ಗುರಿಗಳ ಕುರಿತು ವಿವರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
‘ಕದನ ವಿರಾಮ ಒಪ್ಪಂದದ ಚೌಕಟ್ಟು ಮತ್ತು ನಿಯಮಗಳು ಯಾವುವು ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು’ ಎಂದೂ ಅವರು ಕೇಳಿದ್ದಾರೆ.
‘ಪಾಕಿಸ್ತಾನ ಭಯೋತ್ಪಾದಕ ರಾಷ್ಟ ಎಂಬುದು ಸಂಪೂರ್ಣವಾಗಿ ಸ್ಥಾಪಿತವಾದ ಸತ್ಯ. ಆದರೂ ಮೋದಿ ಸರ್ಕಾರ ಪಾಕಿಸ್ತಾನದ ಜತೆಗಿನ ಬಿಕ್ಕಟ್ಟಿನ ವಿಷಯದಲ್ಲಿ ಅಮೆರಿಕಕ್ಕೆ ಏಕೆ ಅವಕಾಶ ನೀಡುತ್ತಿದೆ’ ಎಂದು ಅವರು ಪ್ರಶ್ನಿಸಿದ್ದಾರೆ.
ಯುಪಿಎ ವಿಚಾರಗಳಾದ ‘ಮೌಂಟೇನ್ ಸ್ಟ್ರೈಕ್ ಕಾರ್ಪ್ಸ್’ ಮತ್ತು ‘ಮಾನವರಹಿತ ವೈಮಾನಿಕ ವ್ಯವಸ್ಥೆಗಳು (ಯುಎಎಸ್) ಮತ್ತು ಡ್ರೋನ್ ಕಾರ್ಪ್ಸ್’ ಕಾರ್ಯರೂಪಕ್ಕೆ ತರುವಂತೆ ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.