ADVERTISEMENT

ಟಿಕೆಟ್ ನಿರಾಕರಣೆ-300 ಕುರ್ಚಿಗಳನ್ನು ಹೊತ್ತೊಯ್ದ ಕಾಂಗ್ರೆಸ್ ಶಾಸಕ !

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 8:29 IST
Last Updated 27 ಮಾರ್ಚ್ 2019, 8:29 IST
ಕಾಂಗ್ರೆಸ್ ಎಂಎಲ್ಎ ಮತ್ತು ಕುರ್ಚಿಗಳು
ಕಾಂಗ್ರೆಸ್ ಎಂಎಲ್ಎ ಮತ್ತು ಕುರ್ಚಿಗಳು   

ಮಹಾರಾಷ್ಟ್ರ: ರಾಜಕಾರಣಿಗಳಿಗೆ ತಮಗೆ ಆಗಬೇಕಾದ ಕೆಲಸಗಳು ಆಗಿಬಿಡಬೇಕು, ಸಿಗಬೇಕಾದ ಸ್ಥಾನಮಾನಸಿಕ್ಕಿಬಿಡಬೇಕು. ಅವು ಸಿಗದಿದ್ದರೆ, ಅವರ ಪರವಾಗಿ ಕೆಲಸಗಳು ಆಗದಿದ್ದರೆ, ಎಂತಹ ಕೀಳುಮಟ್ಟದ ಕೆಲಸಕ್ಕೂ ಇಳಿದುಬಿಡುತ್ತಾರೆ ಎಂಬುದಕ್ಕೆ ಮಹಾರಾಷ್ಟ್ರದ ಕಾಂಗ್ರೆಸ್ ಕಚೇರಿಯೊಂದರಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.

ಕೇಂದ್ರ ಮಹಾರಾಷ್ಟ್ರದ ಕಾಂಗ್ರೆಸ್ಕಚೇರಿಯಲ್ಲಿ ಶಾಸಕರೊಬ್ಬರು ತನಗೆ ಪಕ್ಷ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡಲಿಲ್ಲ ಎಂದು ಆಕ್ರೋಶಗೊಂಡು ಕಚೇರಿಗೆ ತಾವು ಕೊಟ್ಟಿದ್ದ 300 ಕುರ್ಚಿಗಳನ್ನು ಹೊತ್ತೊಯ್ದಿದ್ದಾರೆ.ಔರಂಗಾಬಾದ್ ನ ಸಿಲ್ಲೋದ್ ಕ್ಷೇತ್ರದ ಶಾಸಕ ಅಬ್ದುಲ್ಸತ್ತಾರ್ ಎಂಬುವರೆ ಕುರ್ಚಿಗಳನ್ನು ಹೊತ್ತೊಯ್ದದವರು.

ಔರಂಗಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಬ್ದುಲ್ ಸತ್ತಾರ್ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಹಾಗೂ ಕ್ಷೇತ್ರದಲ್ಲಿ ಕೇಳಿಬಂದಿದ್ದವು. ಆದರೆ, ಮಂಗಳವಾರ ಶಾಹ್‌ಘಂಜ್ ಸ್ಥಳೀಯ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷ ಎನ್‌ಸಿಪಿ ಮುಖಂಡರ ಸಭೆ ಏರ್ಪಡಿಸಲಾಗಿತ್ತು. ಈ ಸಮಯದಲ್ಲಿ ಅಬ್ದುಲ್ ಸತ್ತಾರ್ ಬದಲಿಗೆ ವಿಧಾನಪರಿಷತ್ ಸದಸ್ಯ ಸುಭಾಷ್ ಜಾಮ್ ಬಾದ್ ಎಂಬುವರಿಗೆ ಟಿಕೆಟ್ ನೀಡುತ್ತಿರುವುದಾಗಿ ಘೋಷಿಸಲಾಯಿತು. ಈ ಮಾತು ಕೇಳಿದ ಕೂಡಲೆ ಸತ್ತಾರ್ ಆಕ್ರೋಶಗೊಂಡುಕಾಂಗ್ರೆಸ್ ಕಚೇರಿಯಲ್ಲಿದ್ದ 300 ಕುರ್ಚಿಗಳನ್ನು ಹೊತ್ತೊಯ್ಯುವಂತೆ ತನ್ನ ಬೆಂಬಲಿಗರಿಗೆ ಹೇಳಿದರು. ಕೂಡಲೆ ಮುಖಂಡರೂ ಸೇರಿದಂತೆ ಅಲ್ಲಿದ್ದ ಅಷ್ಟೂ ಜನರನ್ನು ಕುರ್ಚಿಗಳಿಂದಕೆಳಗಿಳಿಸಿದ ಬೆಂಬಲಿಗರು ಅವುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ADVERTISEMENT

ಅನಿರೀಕ್ಷಿತವಾಗಿ ಎದುರಾದ ಈ ಬೆಳವಣಿಗೆಯಿಂದ ವಿಚಲಿತರಾದ ಕಾಂಗ್ರೆಸ್ ಮುಖಂಡರು ನೆಲದಲ್ಲಿ ಕುಳಿತು ಸಭೆ ನಡೆಸಲಾಗದೆ, ಸಮೀಪದಲ್ಲಿಯೇ ಇದ್ದ ಎನ್‌ಸಿಪಿ ಕಚೇರಿಗೆ ತೆರಳಿ ಅಲ್ಲಿ ಸಭೆ ನಡೆಸಿದರು ಎನ್ನಲಾಗಿದೆ.

ಈ ಸಂಬಂಧ ಮಾತನಾಡಿದ ಅಬ್ದುಲ್ಸತ್ತಾರ್, ನನಗೆ ಟಿಕೆಟ್ ತಿರಸ್ಕರಿಸಿದ ಮೇಲೆ ನಾನು ಕೊಟ್ಟಿದ್ದ ಕುರ್ಚಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ನಾನು ಪಕ್ಷವನ್ನು ತೊರೆಯುತ್ತಿದ್ದೇನೆ. ಯಾರು ಟಿಕೆಟ್ ಪಡೆದುಕೊಳ್ಳುತ್ತಾರೋ ಅವರೇ ಇವೆಲ್ಲಾವ್ಯವಸ್ಥೆ ಮಾಡಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಮಾತನಾಡಿದ ಅಭ್ಯರ್ಥಿ ಸುಭಾಷ್ ಜಾಮ್ ಬಾದ್, ಸತ್ತಾರ್ ಅವರಿಗೆ ತುರ್ತಾಗಿ ಕುರ್ಚಿಗೆ ಬೇಕಾಗಿತ್ತೇನೋ ಅದಕ್ಕಾಗಿ ಅವರು ತೆಗೆದುಕೊಂಡು ಹೋಗಿದ್ದಾರೆ. ನಾವು ಇದಕ್ಕಾಗಿ ಬೇಸರ ವ್ಯಕ್ತಪಡಿಸುವುದಿಲ್ಲ. ಸತ್ತಾರ್ ಈಗಲೂ ಕಾಂಗ್ರೆಸ್‌ನಲ್ಲಿಯೇ ಇದ್ದಾರೆ, ಅವರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.