
ಸಾಂದರ್ಭಿಕ ಚಿತ್ರ
ನವದೆಹಲಿ: 2027ರ ಜನಗಣತಿಯಲ್ಲಿ ಕೇಳಲಾಗುವ ಪ್ರಶ್ನೆಗಳಲ್ಲಿ ದೋಷಗಳಿವೆ ಎಂದು ಕಾಂಗ್ರೆಸ್ ಭಾನುವಾರ ದೂರಿದೆ.
ಇದೇ ವೇಳೆ, ಜಾತಿ ಗಣತಿ ನಡೆಸುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ಮತ್ತು ಬದ್ಧತೆಯ ಕುರಿತೂ ಪ್ರಶ್ನಿಸಿದೆ.
ಗಣತಿ ಪ್ರಕ್ರಿಯೆಯ ವಿವರಗಳನ್ನು ಅಂತಿಮಗೊಳಿಸುವ ಮುನ್ನ ರಾಜಕೀಯ ಪಕ್ಷಗಳು, ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಅದು ಆಗ್ರಹಿಸಿದೆ.
ಮನೆಗಳ ಪಟ್ಟಿ ಮತ್ತು ಮನೆಗಳ ಗಣತಿ ಸಂದರ್ಭದಲ್ಲಿ ಕೇಳುವ ಪ್ರಶ್ನೆ ಸಂಖ್ಯೆ 12ರ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಮನೆಯ ಮುಖ್ಯಸ್ಥರು ಇತರೆ ಹಿಂದುಳಿದ ವರ್ಗ (ಒಬಿಸಿ) ಅಥವಾ ಸಾಮಾನ್ಯ ವರ್ಗಕ್ಕೆ ಸೇರಿದ್ದಾರೆಯೇ ಎಂದು ಕೇಳುವ ಬದಲಾಗಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಥವಾ ‘ಇತರೆ’ ವರ್ಗಗಳಿಗೆ ಸೇರಿದ್ದಾರೆಯೇ ಎಂದು ಕೇಳಲಾಗುತ್ತದೆ ಎಂದು ಅದು ಹೇಳಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು, ‘ಜಾತಿ ಗಣತಿಯು 2027ರ ಗಣತಿಯ ಭಾಗ. ಆದರೆ ಪ್ರಶ್ನೆ ಸಂಖ್ಯೆ 12, ಮೋದಿ ಸರ್ಕಾರದ ನೈಜ ಉದ್ದೇಶ ಮತ್ತು ಬದ್ಧತೆಯ ಬಗ್ಗೆ ಗಂಭೀರ ಪ್ರಶ್ನೆ ಎತ್ತುತ್ತದೆ’ ಎಂದು ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.