ADVERTISEMENT

ಸೋಮವಾರದಿಂದ ಸಂಸತ್ ಅಧಿವೇಶನ: ನಾಲ್ಕು ಮಸೂದೆ ವಿರೋಧಿಸಲು ಕಾಂಗ್ರೆಸ್‌ ತೀರ್ಮಾನ

ಪಿಟಿಐ
Published 13 ಸೆಪ್ಟೆಂಬರ್ 2020, 10:44 IST
Last Updated 13 ಸೆಪ್ಟೆಂಬರ್ 2020, 10:44 IST
ಜೈರಾಂ ರಮೇಶ್
ಜೈರಾಂ ರಮೇಶ್   

ನವದೆಹಲಿ: ಸುಗ್ರೀವಾಜ್ಞೆಯಾಗಿ ಸದ್ಯ ಜಾರಿಯಲ್ಲಿರುವ 11 ಕಾಯ್ದೆಗಳಿಗೆ ಸಂಬಂಧಿಸಿ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಮಂಡಿಸಲಿರುವ ಮಸೂದೆಗಳ ಪೈಕಿ ನಾಲ್ಕು ಮಸೂದೆಗಳನ್ನು ವಿರೋಧಿಸಲು ಕಾಂಗ್ರೆಸ್ ತೀರ್ಮಾನಿಸಿದೆ.

ವಿರೋಧಪಕ್ಷಗಳು ಆತಂಕ ವ್ಯಕ್ತಪಡಿಸಲಿರುವ ನಾಲ್ಕು ಮಸೂದೆಗಳಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಉತ್ತರಿಸಬೇಕು ಎಂಬುದು ಕಾಂಗ್ರೆಸ್ ಪಕ್ಷದ ಆಗ್ರಹವಾಗಿದೆ.

ಕೃಷಿಗೆ ಸಂಬಂಧಿಸಿದ ಮೂರು ಹಾಗೂ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ಸಂಬಂಧಿಸಿದ ಒಂದು ಮಸೂದೆ ವಿರೋಧಿಸಲು ಸಮಾನ ಮನಸ್ಕ ಪಕ್ಷಗಳ ಜೊತೆಗೂ ಚರ್ಚೆ ನಡೆದಿದೆ ಎಂದು ಪಕ್ಷದ ಮುಖಂಡ ಜೈರಾಂ ರಮೇಶ್ ತಿಳಿಸಿದರು.

ADVERTISEMENT

ಕೋವಿಡ್–19 ಆತಂಕ ಸ್ಥಿತಿಯ ನಡುವೆಯೂ ಮುಂಜಾಗ್ರತಾ ಕ್ರಮಗಳೊಂದಿಗೆ ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರ ಆರಂಭವಾಗಲಿದೆ.

ಕೋವಿಡ್ ನಿರ್ವಹಣೆ, ಆರ್ಥಿಕ ಸ್ಥಿತಿ, ಭಾರತ– ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಕುರಿತಂತೆ ದೇಶದ ಪ್ರಮುಖ ವಿಷಯಗಳ ಕುರಿತು ಸರ್ಕಾರವನ್ನು ಎದುರಿಸುವ ಬಗ್ಗೆ ಜಂಟಿ ಕಾರ್ಯತಂತ್ರ ರೂಪಿಸಲೂ ಸಮಾನ ಮನಸ್ಕ ಪಕ್ಷಗಳು ನಿರ್ಧರಿಸಿವೆ.

ವಿಡಿಯೊ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈರಾಂ ರಮೇಶ್ ಅವರು, ‘ಗಡಿ ವಿಷಯ, ಆರ್ಥಿಕತೆ, ಇತರೆ ಗಂಭೀರ ವಿಷಯಗಳನ್ನು ಕುರಿತು ಉಭಯ ಸದನಗಳಲ್ಲಿ ಚರ್ಚೆ ಆಗಬೇಕು ಎಂದು ವಿರೋಧಪಕ್ಷ ಬಯಸಲಿದೆ. ಪ್ರಧಾನಮಂತ್ರಿ ಅವರೇ ಉಭಯ ಸದನಗಳಲ್ಲಿ ಹಾಜರಿದ್ದು ಉತ್ತರಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ’ ಎಂದು ಹೇಳಿದರು.

‘ಈ ಕುರಿತು ಒಮ್ಮತ ವ್ಯಕ್ತಪಡಿಸಲು ಸಮಾನ ಮನಸ್ಕ ಪಕ್ಷಗಳ ಜೊತೆಗೆ ನಾನು ಹಾಗೂ ಗುಲಾಂ ನಬಿ ಅಜಾದ್, ಆನಂದ್ ಶರ್ಮಾ ಮತ್ತು ಕೆ.ಸಿ.ವೇಣುಗೋಪಾಲ್ ಚರ್ಚಿಸುತ್ತಿದ್ದೇವೆ. ಸುಗ್ರೀವಾಜ್ಞೆ ರೂಪದಲ್ಲಿ ಜಾರಿಯಲ್ಲಿರುವ ಕಾಯ್ದೆ ಕುರಿತು ಅನೇಕ ಅಂಶಗಳನ್ನು ಪ್ರಸ್ತಾಪಿಸಲು ತೀರ್ಮಾನಿಸಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.