ADVERTISEMENT

ಅಧ್ಯಕ್ಷತೆ: ಮತದಾನ ಇಂದು | ಖರ್ಗೆ–ತರೂರ್‌ ಮಧ್ಯೆ ಸ್ಪರ್ಧೆ

ಕಾಂಗ್ರೆಸ್ ಚುನಾವಣೆ: ಖರ್ಗೆ–ತರೂರ್‌ ಮಧ್ಯೆ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2022, 21:42 IST
Last Updated 16 ಅಕ್ಟೋಬರ್ 2022, 21:42 IST
   

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆಯ ಮತದಾನ ಸೋಮವಾರ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಅವರಲ್ಲಿ ಯಾರಿಗೆ ಈ ಸ್ಥಾನವು ಒಲಿಯಲಿದೆ ಎಂಬುದು ತೀರ್ಮಾನವಾಗಲಿದೆ. ಎರಡು ದಶಕಗಳ ಬಳಿಕ, ನೆಹರೂ–ಗಾಂಧಿ ಕುಟುಂಬದ ಹೊರಗಿನವರ ಕೈಗೆ ಅಧ್ಯಕ್ಷ ಸ್ಥಾನ ಸಿಗಲಿದೆ.

ಮತದಾನದ ಅರ್ಹತೆ ಹೊಂದಿರುವ 9,000ಕ್ಕೂ ಹೆಚ್ಚು ಪ್ರತಿನಿಧಿಗಳಿದ್ದಾರೆ. ಕಾಂಗ್ರೆಸ್ ಕೇಂದ್ರ ಕಚೇರಿ ಮತ್ತು ಇತರ 65 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಕಾಂಗ್ರೆಸ್ ಪಕ್ಷದ 137 ವರ್ಷಗಳ ಇತಿಹಾಸದಲ್ಲಿ ಆರನೇ ಬಾರಿ ಚುನಾವಣೆ ನಡೆಯುತ್ತಿದೆ.ಮತ ಎಣಿಕೆಯು ಬುಧವಾರ ನಡೆಯಲಿದೆ.

ನೆಹರೂ–ಗಾಂಧಿ ಕುಟುಂಬಕ್ಕೆ ಹತ್ತಿರವಾಗಿರುವ ಖರ್ಗೆ ಅವರಿಗೆ ಪ್ರಮುಖ ಮುಖಂಡರ ಬೆಂಬಲ ಇದೆ. ಹಾಗಾಗಿ, ಖರ್ಗೆ ಅವರು ಗೆಲ್ಲುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಪಕ್ಷದಲ್ಲಿ ಬದಲಾವಣೆ ತರುವುದಕ್ಕಾಗಿ ತಮಗೆ ಮತ ಹಾಕಿ ಎಂದು ತರೂರ್ ಅವರು ಪ್ರಚಾರ ಸಂದರ್ಭದಲ್ಲಿ ಹೇಳಿದ್ದಾರೆ.

ADVERTISEMENT

ತಮಗೆ ಚುನಾವಣೆಯಲ್ಲಿ ಸಮಾನ ಅವಕಾಶ ಇಲ್ಲದ ಸ್ಥಿತಿ ನಿರ್ಮಾಣ ಆಗಿದೆ ಎಂದು ತರೂರ್ ಅವರು ಪ್ರಚಾರದ ಸಂದರ್ಭದಲ್ಲಿ ಹೇಳಿದ್ದರು. ಆದರೆ, ನೆಹರೂ–ಗಾಂಧಿ ಕುಟುಂಬವು ತಟಸ್ಥವಾಗಿದೆ ಮತ್ತು ‘ಅಧಿಕೃತ’ ಅಭ್ಯರ್ಥಿಯಾಗಿ ಯಾರೂ ಇಲ್ಲ ಎಂದು ಇಬ್ಬರೂ ಅಭ್ಯರ್ಥಿಗಳು ಹೇಳಿಕೊಂಡಿದ್ದಾರೆ.

‘ಪಕ್ಷದ ಚುನಾವಣೆಯು ಯಾವುದೇ ರೀತಿಯಲ್ಲಿಯೂ ಪಕ್ಷದ ಸಂಘಟನೆಯನ್ನು ಬಲಪಡಿಸುತ್ತದೆ ಎಂಬುದು ನನಗೆ ಮನವರಿಕೆ ಆಗಿಲ್ಲ. ಚುನಾವಣೆಯು ವ್ಯಕ್ತಿಗತ ಉದ್ದೇಶಗಳನ್ನು ಈಡೇರಿಸಬಹುದು. ಆದರೆ, ಸಾಮೂಹಿಕ ಸ್ಫೂರ್ತಿಯನ್ನು ಹೆಚ್ಚಿಸುತ್ತದೆ ಎಂಬುದು ಅನುಮಾನಾಸ್ಪದ’ ಎಂದು ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್‌ ರಮೇಶ್ ಹೇಳಿದ್ದಾರೆ.

ಯಾತ್ರೆಯಲ್ಲಿ ರಾಹುಲ್‌ ಮತದಾನ

ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಾಂಗ್ರೆಸ್‌ ಕೇಂದ್ರ ಕಚೇರಿಯಲ್ಲಿ ಮತ ಚಲಾಯಿಸುವ ನಿರೀಕ್ಷೆ ಇದೆ. ‘ಭಾರತ್‌ ಜೋಡೊ’ ಯಾತ್ರೆ ನಡೆಸುತ್ತಿರುವ ರಾಹುಲ್‌ ಗಾಂಧಿ ಅವರು ಕರ್ನಾಟಕದ ಸಂಗನಕಲ್ಲು ಎಂಬಲ್ಲಿ ಮತ ಚಲಾಯಿಸಲಿದ್ದಾರೆ. ಅವರ ಜತೆಗೆ ಯಾತ್ರೆ ಕೈಗೊಂಡಿರುವ ಮತ್ತು ಮತದಾನದ ಅರ್ಹತೆ ಇರುವ ಸುಮಾರು 40 ಮಂದಿಯೂ ಇಲ್ಲಿ ಮತ ಹಾಕಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.