ADVERTISEMENT

ವಿಧಾನಸಭೆ ವಿಸರ್ಜನೆ: ಮಲಿಕ್‌ಗೆ ಎನ್‌ಸಿ ತಿರುಗೇಟು

ಶಾಸಕರ ಖರೀದಿ ಆರೋಪ ಸಾಬೀತು ಮಾಡಲು ರಾಜ್ಯಪಾಲರಿಗೆ ಸವಾಲು

ಪಿಟಿಐ
Published 22 ನವೆಂಬರ್ 2018, 19:21 IST
Last Updated 22 ನವೆಂಬರ್ 2018, 19:21 IST
ಒಮರ್‌ ಹಾಗೂ ರಾಮಮಾಧವ್‌
ಒಮರ್‌ ಹಾಗೂ ರಾಮಮಾಧವ್‌   

ಶ್ರೀನಗರ/ಜಮ್ಮು: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯನ್ನು ವಿಸರ್ಜಿಸಿದ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಕ್ರಮ ತೀಕ್ಷ್ಣ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಭಿನ್ನ ರಾಜಕೀಯ ಸಿದ್ಧಾಂತ ಹೊಂದಿವೆ ಎಂಬ ಕಾರಣಕ್ಕೆ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ)–ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ)–ಕಾಂಗ್ರೆಸ್‌ ನಡುವಣ ಮೈತ್ರಿಯನ್ನು ರಾಜ್ಯಪಾಲರು ತಿರಸ್ಕರಿಸಿರುವುದನ್ನು ಎನ್‌ಸಿ ನಾಯಕ ಒಮರ್ ಅಬ್ದುಲ್ಲಾ ಗುರುವಾರ ಪ್ರಶ್ನಿಸಿದ್ದಾರೆ.

ಆದರೆ, ರಾಜ್ಯಪಾಲರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಇಂತಹ ಮೈತ್ರಿಯಿಂದ ಸ್ಥಿರ ಸರ್ಕಾರ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಸರ್ಕಾರ ರಚಿಸುವುದಕ್ಕಾಗಿ ಶಾಸಕರ ಖರೀದಿ ನಡೆದಿದೆ ಎಂದು ಮಾಡಿರುವ ಆರೋಪಕ್ಕೆ ಪೂರಕವಾದ ವರದಿಗಳನ್ನು ರಾಜ್ಯಪಾಲರು ಬಹಿರಂಗ ಮಾಡಬೇಕು ಎಂದು ಒಮರ್‌ ಒತ್ತಾಯಿಸಿದ್ದಾರೆ. ಶಾಸಕರನ್ನು ಯಾರು ಖರೀದಿಸುತ್ತಿದ್ದಾರೆ ಮತ್ತು ಅದಕ್ಕೆ ಹಣ ಹೂಡಿಕೆ ಮಾಡಿದವರು ಯಾರು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಜನರಿಗೆ ಇದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಚಳಿಗಾಲದ ರಾಜಧಾನಿ ಜಮ್ಮುವಿನಲ್ಲಿ ಮಾತನಾಡಿದ ಮಲಿಕ್‌ ಅವರು, ‘ಶಾಸಕರ ಖರೀದಿಗೆ ಸಂಬಂಧಿಸಿ 15–20 ದಿನಗಳಿಂದ ವರದಿಗಳು ಬಂದಿವೆ. ಶಾಸಕರಿಗೆ ಬೆದರಿಕೆ ಒಡ್ಡಲಾಗುತ್ತಿತ್ತು ಮತ್ತು ವಿವಿಧ ರೀತಿಯ ಅಕ್ರಮ ವ್ಯವಹಾರಗಳು ನಡೆಯುತ್ತಿದ್ದವು’ ಎಂದು ಮಲಿಕ್‌ ಹೇಳಿದ್ದಾರೆ. ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದಾಗಿ ವಿಧಾನಸಭೆ ವಿಸರ್ಜನೆ ಮಾಡಲಾಗಿದೆ ಎಂಬ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ. ವಿಧಾನಸಭೆ ವಿಸರ್ಜನೆ ಬಳಿಕ ರಾಜ್ಯಪಾಲರು ಮಾಧ್ಯಮಗೋಷ್ಠಿ ನಡೆಸುವುದು ಬಹಳ ವಿರಳ.

ಎನ್‌ಸಿ ಮತ್ತು ಕಾಂಗ್ರೆಸ್‌ ಬೆಂಬಲದಲ್ಲಿ ಸರ್ಕಾರ ರಚಿಸಲು ಪಿಡಿಪಿ ಬುಧವಾರ ಹಕ್ಕು ಮಂಡಿಸಿತ್ತು. ಅದಾಗಿ ಸ್ವಲ್ಪವೇ ಹೊತ್ತಲ್ಲಿ ಪೀಪಲ್ಸ್‌ ಕಾನ್ಫರೆನ್ಸ್‌ ನಾಯಕ ಸಜ್ಜದ್‌ ಲೋನ್‌ ಅವರೂ ಹಕ್ಕು ಮಂಡಿಸಿದ್ದರು. ತಮಗೆ ಬಿಜೆಪಿಯ ಬೆಂಬಲ ಇದೆ ಎಂದು ಅವರು ಹೇಳಿದ್ದರು. ಈ ಎರಡು ಗುಂಪಲ್ಲಿ ಯಾವುದೇ ಒಂದಕ್ಕೆ ಅವಕಾಶ ಕೊಟ್ಟಿದ್ದರೆ ಇನ್ನೂ ದೊಡ್ಡ ಗೊಂದಲ ಉಂಟಾಗುತ್ತಿತ್ತು ಎಂದು ಮಲಿಕ್‌ ವಿವರಿಸಿದ್ದಾರೆ.

ಅದರೆ, ರಾಜ್ಯಪಾಲರ ನಿರ್ಧಾರವನ್ನು ಬಿಜೆಪಿಯೇತರ ಪಕ್ಷಗಳು ಖಂಡಿಸಿವೆ. ಪಿಡಿಪಿ ನೇತೃತ್ವದ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಅವಕಾಶ ಕೊಡುವುದೇ ಸರಿಯಾದ ನಿರ್ಧಾರವಾಗುತ್ತಿತ್ತು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪಾಕ್‌ ಕುಮ್ಮಕ್ಕು: ರಾಮ್‌–ಒಮರ್‌ ತಿಕ್ಕಾಟ
ಪಾಕಿಸ್ತಾನದಿಂದ ಬಂದ ಸೂಚನೆಯಂತೆ ಪಿಡಿಪಿ–ಎನ್‌ಸಿ–ಕಾಂಗ್ರೆಸ್‌ ಮೈತ್ರಿ ಕೂಟವು ಸರ್ಕಾರ ರಚನೆಗೆ ಮುಂದಾಗಿತ್ತು ಎಂಬ ಹೇಳಿಕೆಯನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮಮಾಧವ್‌ ವಾಪಸ್‌ ಪಡೆದಿದ್ದಾರೆ.

ಮಾಧವ್‌ ಅವರು ಈ ಆರೋಪ ಮಾಡುತ್ತಿದ್ದಂತೆಯೇ ಒಮರ್‌ ಅಬ್ದುಲ್ಲಾ ಅವರು ಟ್ವಿಟರ್‌ ಮೂಲಕ ಕಟುಪ್ರತಿಕ್ರಿಯೆ ನೀಡಿದರು. ‘ರಾ, ರಾಷ್ಟ್ರೀಯ ತನಿಖಾ ಸಂಸ್ಥೆ, ಗುಪ್ತಚರ ದಳ ನಿಮ್ಮ ನಿಯಂತ್ರಣದಲ್ಲಿಯೇ ಇವೆ. ಸಿಬಿಐ ನಿಮ್ಮ ಪಂಜರದ ಗಿಣಿ. ಹಾಗಾಗಿ ಮಾಡಿದ ಆರೋಪಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಬಹಿರಂಗಪಡಿಸಿ, ಇಲ್ಲವೇ ಕ್ಷಮೆ ಕೇಳುವ ಧೈರ್ಯ ತೋರಿ. ಸುಮ್ಮನೆ, ಆರೋಪ ಮಾಡಿ ಪರಾರಿಯಾಗುವ ರಾಜಕಾರಣ ಮಾಡಬೇಡಿ’ ಎಂದು ಒಮರ್‌ ಟ್ವೀಟ್‌ ಮಾಡಿದರು.

‘ನಿಮ್ಮ ರಾಷ್ಟ್ರಪ್ರೇಮವನ್ನು ಪ್ರಶ್ನಿಸುವುದಿಲ್ಲ, ಆದರೆ, ಸರ್ಕಾರ ರಚಿಸುವುದಕ್ಕಾಗಿ ಎನ್‌ಸಿ ಮತ್ತು ಪಿಡಿಪಿಯ ನಡುವೆ ದಿಢೀರ್‌ ಉಂಟಾದ ಪ್ರೇಮದಿಂದಾಗಿ ಹಲವು ಸಂಶಯಗಳು ಉಂಟಾಗಿವೆ. ನಿಮ್ಮನ್ನು ನೋಯಿಸುವ ಉದ್ದೇಶ ಇರಲಿಲ್ಲ’ ಎಂದು ರಾಮಮಾಧವ್‌ ಕೊಟ್ಟ ಪ್ರತಿಕ್ರಿಯೆ ಒಮರ್‌ ಅವರನ್ನು ಸಮಾಧಾನಗೊಳಿಸಲಿಲ್ಲ. ಮಾಡಿದ ಆರೋಪವನ್ನು ಸಾಬೀತು ಮಾಡುವಂತೆ ಅವರು ಪಟ್ಟು ಹಿಡಿದರು. ಕೊನೆಗೂ, ರಾಮಮಾಧವ್‌ ತಮ್ಮ ಹೇಳಿಕೆಯನ್ನು ವಾಪಸ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.