ADVERTISEMENT

ಛತ್ತೀಸಗಡದಲ್ಲಿ ಬಿಜೆಪಿ ತೊಡೆದು ಕಾಂಗ್ರೆಸ್‌ ಅಧಿಕಾರಕ್ಕೆ: ರಾಹುಲ್‌ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 10:26 IST
Last Updated 9 ನವೆಂಬರ್ 2018, 10:26 IST
   

ರಾಜ್‌ನಂದಗಾವ್‌(ಛತ್ತೀಸಗಡ):ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮಾಡಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಈ ಚುನಾವಣೆಗೆ 10 ದಿನಬಾಕಿ ಇದೆ. ಚುನಾವಣೆ ಬಳಿಕ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಧಿಕಾರ ಹಿಡಿಯಲಿದ್ದಾರೆ. ರೈತರ ಸಾಲವನ್ನೂ ಮನ್ನಾ ಕೂಡ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶುಕ್ರವಾರ ಇಲ್ಲಿನ ರಾಜ್‌ನಂದಗಾವ್‌ನಲ್ಲಿ ವಿಧಾನ ಸಭೆ ಚುನಾವಣೆ ಪ್ರಚಾರ ಭಾಷಣ ಮಾಡಿದ ಅವರು, ರೈತರ ಹಿತ ಕಾಯಲು ಕಾಂಗ್ರೆಸ್ ಬದ್ಧ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ರೈತ ಪರ ಯಾವ ಕಾರ್ಯವನ್ನು ಕೈಗೊಳ್ಳಲಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರೈತರಿಗೆ ಯಾವುದೇ ಕೊಡುಗೆ/ಬೋನಸ್‌ ನೀಡಲಿಲ್ಲ ಎಂದು ಮುಖ್ಯಮಂತ್ರಿ ರಮಣ್‌ ಸಿಂಗ್‌ ವಿರುದ್ಧ ವಾಗ್ದಾಳಿ ಮಾಡಿದ ರಾಹುಲ್‌, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರೈತರಿಗೆ ಗೋಧಿ ಬೆಳೆಗೆ ಬೆಂಬಲ ಬೆಲೆ ನೀಡಲು ಎಲ್ಲಾ ರೀತಿಯಲ್ಲಿ ಕ್ರಮ ಕೈಗೊಳ್ಳಲಿದೆ. ಈ ಹಿಂದೆ ಕಾಂಗ್ರೆಸ್‌ ಬೆಂಬಲ ಬೆಲೆ ಕೊಡುವ ಕೆಲಸ ಆರಂಭಿಸಿತು. ರೈತರ ಹಿತ ಕಾಯಲು ಪಕ್ಷ ಬದ್ಧವಾಗಿದೆ. ಅಧಿಕಾರಕ್ಕೆ ಬಂದ ಕೂಡಲೇ ರೈತರ ಸಾಲಮನ್ನಾ ಮಾಡಲಾಗುವುದು. ಈ ಮೂಲಕ ಕಾಂಗ್ರೆಸ್‌ ರೈತರಿಗೆ ಬೋನಸ್‌ ನೀಡಲಿದೆ ಎಂದು ಹೇಳಿದರು.

ADVERTISEMENT

ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರ ಮತ್ತು ಉನ್ನತ ಶಿಕ್ಷಣದಲ್ಲಿ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಅವುಗಳನ್ನು ತುಂಬುವ ಮತ್ತು ಬುಡಕಟ್ಟು, ಆದಿವಾಸಿ ಜನರ ಶ್ರೇಯೋಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿಲ್ಲ. ಕಾಂಗ್ರೆಸ್‌ ಅಧಿಕಾಕ್ಕೆ ಬಂದರೆ ಆಹಾರ ಸಂಸ್ಕರಣ ಘಟಕ ನಿರ್ಮಿಸಲು ಕ್ರಮ ಕೈಗೊಳ್ಳಲಿದೆ ಹಾಗೂ ಎಲ್ಲ ವರ್ಗದವರ ಪರವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.

ಪಂಜಾಬ್‌ ಮತ್ತು ಕರ್ನಾಕದಲ್ಲಿ ನಡೆದ ಚುನಾವಣೆ ಬಳಿಕ ಕಾಂಗ್ರೆಸ್‌ ಒಳಗೊಂಡ ಸರ್ಕಾರದಿಂದರೈತರ ಸಾಲಮನ್ನಾ ಮಾಡಲಾಯಿತು. ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್‌ ಮಾಡಿರುವ ಜನಪರ ಕೆಲಸ ಸುಳ್ಳಾ? ನಿಜನಾ? ನೀವೇ ಯೋಚಿಸಿ ಎಂದು ರಾಹುಲ್‌ ಕೇಳಿದರು.

ನರೇಂದ್ರ ಮೋದಿ ಅವರು ಉಳ್ಳವರ, ವಂಚನೆ ಮಾಡಿದವರ ಸಾಲ ಮನ್ನಾ ಮಾಡುತ್ತಾರೆ. ಆದರೆ, ರೈತ ಪರವಾದ ಯೋಜನೆಗಳನ್ನು ಕೈಗೊಳ್ಳುತ್ತಿಲ್ಲ, ಸಾಲ ಮನ್ನಾ ಮಾಡುತ್ತಿಲ್ಲ ಎಂದು ರಾಹುಲ್‌ ದೂರಿದರು.

2015ರಲ್ಲಿ ಛತ್ತಿಸ್‌ಗಡದಲ್ಲಿ ಬಿಜೆಪಿ ಸರ್ಕಾರ ಇತ್ತು. ಕಳೆದ ನಾಲ್ಕು ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಪ್ರಧಾನಿ ಬರೀ ಸುದೀರ್ಘ ಭಾಷಣ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ₹15 ಲಕ್ಷ ವನ್ನು ಪ್ರತಿಯೊಬ್ಬರ ಖಾತೆ ಹಾಕುವುದಾಗಿ ಹೇಳಿದ್ದರು. ಆದರೆ, ಅದು ಆಗಲಿಲ್ಲ. ಬದಲಿಗೆ, ನೋಟ್‌ ಬ್ಯಾನ್‌ ಮಾಡಿದರು. ಅವರ ಈ ಬಗೆಯ ನಡೆಯಿಂದ ದೇಶದ ನಾಗರಿಕರು, ರೈತರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆಪಾದಿಸಿದರು.

ಪ್ರಧಾನಿ ನಕ್ಸಲ್‌ ಬಗ್ಗೆ ಮಾತನಾಡುತ್ತಾರೆ. ರೋಜ್‌ಗಾರ್‌ ಮತ್ತು ರೈತರಿಗೆ ಬೆಂಬಲ ಬೆಲೆ ನೀಡುವ ಹಾಗೂ ಸಾಲ ಮನ್ನಾ ಮಾಡುವ ಬಗ್ಗೆ ಮಾತನಾಡುತ್ತಿಲ್ಲ. ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಾರೆ. ಚೌಕಿದಾರರಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.

ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ ಅನ್ನು ಬದಿಗಿಟ್ಟು ಫ್ರಾನ್ಸ್‌ ಜತೆ ರಫೆಲ್‌ ಒಪ್ಪಂದ ಮಾಡಿಕೊಂಡರು. ಮೋದಿ ಮಿತ್ರ ಅನಿಲ್‌ ಅಂಬಾನಿಗೆ ಅವಕಾಶ ನೀಡಿದರು. ಉದ್ಯಮಿಗಳಾದ ನೀರವ್ ಮೋದಿ, ವಿಜಯ್‌ ಮಲ್ಯಾ ಅವರು ವಂಚನೆ ಮಾಡಿ ದೇಶಬಿಟ್ಟು ಹೋದರು. ಅವರಿಗೆ ಬೆಂಗಾವಲಾಗಿ ಕೇಂದ್ರ ಸರ್ಕಾರ ನಿಂತಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.