
ಕಾಂಗ್ರೆಸ್
ನವದೆಹಲಿ: ಕೇಂದ್ರ ಸರ್ಕಾರವು ಬಡವರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ. ಬಡವರ ಶಾಸನಬದ್ಧ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನರೇಗಾ ಯೋಜನೆಯನ್ನು (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ) ವಿಬಿ-ಜಿ ರಾಮ್ ಜಿ ಯೋಜನೆಯನ್ನಾಗಿ ಜಾರಿಗೊಳಿಸಿರುವುದನ್ನು ವಿರೋಧಿಸಿ ದೆಹಲಿಯ ಕಾಂಗ್ರೆಸ್ ಘಟಕವು, ಇಲ್ಲಿನ ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿ ಕಚೇರಿಯಲ್ಲಿ ‘ನರೇಗಾ ರಕ್ಷಿಸಿ ಸಂಗ್ರಾಮ ಯಾತ್ರೆ’ ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ನರೇಗಾ ಯೋಜನೆಯು ಲಕ್ಷಾಂತರ ಕುಟುಂಬಗಳಿಗೆ ಉದ್ಯೋಗದ ಹಕ್ಕನ್ನು ನೀಡಿದೆ. ವಿಬಿ-ಜಿ ರಾಮ್ ಜಿ ಯೋಜನೆಯು ನರೇಗಾದ ಮೂಲ ಚೈತನ್ಯವನ್ನು ದುರ್ಬಲಗೊಳಿಸುತ್ತದೆ’ ಎಂದರು.
‘ಸರ್ಕಾರದ ಕ್ರಮಗಳು ಬಡವರ ಮೇಲೆ ದಾಳಿಯನ್ನು ಸೂಚಿಸುತ್ತದೆ. ಬಡವರನ್ನು ಬೆಂಬಲಿಸುವ ವ್ಯವಸ್ಥೆಗಳನ್ನು ಕ್ರಮೇಣವಾಗಿ ತೆಗೆದು ಹಾಕಲಾಗುತ್ತಿದೆ’ ಎಂದು ಕಾಂಗ್ರೆಸ್‌ನ ದೆಹಲಿ ಘಟಕದ ಅಧ್ಯಕ್ಷ ದೇವೇಂದ್ರ ಯಾದವ್ ಹೇಳಿದರು.
ವಿಬಿ-ಜಿ ರಾಮ್ ಜಿ ಯೋಜನೆಯನ್ನು ತೆಗೆದು ಹಾಕಿ, ನರೇಗಾವನ್ನು ಮರುಜಾರಿಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ದೇಶದಾದ್ಯಂತ ‘ನರೇಗಾ ರಕ್ಷಿಸಿ ಸಂಗ್ರಾಮ ಯಾತ್ರೆ’ ಪ್ರತಿಭಟನೆ ಹಮ್ಮಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.