ADVERTISEMENT

ಕೇಂದ್ರದಿಂದ ಹೊಸ ವರ್ಷಕ್ಕೆ ಪಡಿತರ ಕಡಿತದ ಉಡುಗೊರೆ: ಕಾಂಗ್ರೆಸ್‌ ಟೀಕೆ

ಪಿಟಿಐ
Published 3 ಜನವರಿ 2023, 13:01 IST
Last Updated 3 ಜನವರಿ 2023, 13:01 IST
ಜೈರಾಮ್‌ ರಮೇಶ್‌
ಜೈರಾಮ್‌ ರಮೇಶ್‌   

ನವದೆಹಲಿ: ಕೇಂದ್ರ ಸರ್ಕಾರವು ಹೊಸ ವರ್ಷದಲ್ಲಿ 81 ಕೋಟಿ ಬಡವರ ಪಡಿತರವನ್ನು ಶೇ 50ರಷ್ಟು ಕಡಿತಗೊಳಿಸಿದೆ ಎಂದು ಕಾಂಗ್ರೆಸ್‌ ಮಂಗಳವಾರ ಆರೋಪಿಸಿದೆ.

ತಿಂಗಳಿಗೆ 10 ಕೆ.ಜಿ ಆಹಾರಧಾನ್ಯಕ್ಕೆ ಅರ್ಹರಾಗಿದ್ದ 81 ಕೋಟಿ ಭಾರತೀಯರು ಈಗ ಕೇವಲ ಐದು ಕೆ.ಜಿಯಷ್ಟನ್ನು ಮಾತ್ರ ಪಡೆಯಲಿದ್ದಾರೆ. ಇದು ಹೊಸ ವರ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಉಡುಗೊರೆಯಾಗಿದೆ ಎಂದು ಅದು ದೂರಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟವು ‘ಪ್ರಧಾನ ಮಂತ್ರಿ ಗರೀಬ್‌ ಅನ್ನ ಕಲ್ಯಾಣ್‌ ಯೋಜನೆ’ಯನ್ನು (ಪಿಎಂಜಿಕೆಎವೈ) ಸ್ಥಗಿತಗೊಳಿಸಿದೆ. ಈ ಯೋಜನೆ ಮೂಲಕ ರಾಷ್ಟ್ರೀಯ ಆಹಾರ ಭದ್ರತಾ ಕಾನೂನಿನ (ಎನ್‌ಎಫ್‌ಎಸ್‌ಎ) ಅಡಿಯ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ ಐದು ಕೆ.ಜಿ ಆಹಾರ ಧಾನ್ಯ ದೊರೆಯುತ್ತಿತ್ತು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ತಿಳಿಸಿದರು.

ADVERTISEMENT

ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸದೆ, ಸಂಸತ್ತಿನಲ್ಲಿ ಚರ್ಚಿಸದೆ ಪ್ರಧಾನಿ ಅವರು ದಿಢೀರನೇ ಪಡಿತರವನ್ನು ಶೇ 50ರಷ್ಟು ಕಡಿತಗೊಳಿಸುವ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಇದು ಪ್ರಧಾನಿಯ ‘ಪ್ರತಿಗಾಮಿ’ ನಿರ್ಧಾರ ಎಂದು ಅವರು ದೂರಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಪಿಎಂಜಿಕೆಎವೈ ಅಡಿಯಲ್ಲಿ 28 ತಿಂಗಳುಗಳ ಉಚಿತ ಆಹಾರ ಧಾನ್ಯಗಳ ವಿತರಣೆಯನ್ನು ಕೇಂದ್ರವು ಕೈಗೆತ್ತಿಕೊಂಡಿತ್ತು. ಆದರೆ ಈ ಯೋಜನೆ ಡಿಸೆಂಬರ್‌ನಲ್ಲಿ ಕೊನೆಗೊಂಡಿತ್ತು. ಆದಾಗ್ಯೂ, ಎನ್‌ಎಫ್‌ಎಸ್‌ಎ ಅಡಿಯಲ್ಲಿ ಸುಮಾರು 81.35 ಕೋಟಿ ಫಲಾನುಭವಿಗಳಿಗೆ ವಿತರಿಸಲಾದ ಸಬ್ಸಿಡಿ ಆಹಾರ ಧಾನ್ಯಗಳನ್ನು 2023ರಲ್ಲಿ ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸಂಪುಟ ತೆಗೆದುಕೊಂಡ ನಿರ್ಧಾರವನ್ನು ಕೇಂದ್ರ ಆಹಾರ ಸಚಿವ ಪೀಯೂಷ್ ಗೋಯಲ್ ಇತ್ತೀಚೆಗೆ ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.