ADVERTISEMENT

ಶಾಸಕರನ್ನು ಕಾಂಗ್ರೆಸ್‌ ಮಾರುತ್ತಿದೆ, ಬಿಜೆಪಿ ಖರೀದಿಸುತ್ತಿದೆ: ಎಎಪಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 1:47 IST
Last Updated 17 ಜುಲೈ 2020, 1:47 IST
ಎಎಪಿ ರಾಷ್ಟ್ರೀಯ ವಕ್ತಾರ ರಾಘವ್ ಚಡ್ಡಾ
ಎಎಪಿ ರಾಷ್ಟ್ರೀಯ ವಕ್ತಾರ ರಾಘವ್ ಚಡ್ಡಾ   

ನವದೆಹಲಿ: ಶರಶಯ್ಯೆಯಲ್ಲಿರುವ ಕಾಂಗ್ರೆಸ್‌, ತನ್ನ ಮತಗಳನ್ನು ಮತ್ತು ಶಾಸಕರನ್ನು ಬಿಜೆಪಿಗೆ ಮಾರುತ್ತಿದೆ. ಈ ಮೂಲಕ ಜನರ ನಂಬಿಕೆಗೆ ಭಂಗ ತಂದಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಗುರುವಾರ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದೆ.

ರಾಜಸ್ಥಾನದ ಸದ್ಯದ ರಾಜಕೀಯ ಮೇಲಾಟಗಳ ಹಿನ್ನೆಲೆಯಲ್ಲಿ ಎಎಪಿ ಕಾಂಗ್ರೆಸ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದೆ. ಕೋವಿಡ್‌–19 ಸಾಂಕ್ರಾಮಿಕಗೊಂಡಿರುವ ಈ ಹೊತ್ತಿನಲ್ಲಿ ಎಲ್ಲರೂ ಅದರ ವಿರುದ್ಧ ಒಟ್ಟಾಗಿ ಹೋರಾಡಬೇಕು. ಆದರೆ, ಕಾಂಗ್ರೆಸ್‌ ಮತ್ತು ಬಿಜೆಪಿ ಕೊಳಕು ರಾಜಕೀಯದಲ್ಲಿ ತೊಡಗಿವೆ ಎಂದು ಆಮ್‌ ಆದ್ಮಿಅಸಮಾಧಾನ ವ್ಯಕ್ತಪಡಿಸಿದೆ.

‘ಒಂದು ಪಕ್ಷವು ತನ್ನ ಮತಗಳನ್ನು ಮತ್ತು ಶಾಸಕರನ್ನು ಮಾರಾಟ ಮಾಡುತ್ತಿದ್ದರೆ, ಇನ್ನೊಂದು ಪಕ್ಷವು ಅವುಗಳನ್ನು ಖರೀದಿಸುತ್ತಿದೆ. ನಾವು ಅನೈತಿಕ ರಾಜಕಾರಣಕ್ಕೆ ಸಾಕ್ಷಿಯಾಗಿದ್ದೇವೆ. ಕಾಂಗ್ರೆಸ್‌ಗೆ ವಯಸ್ಸಾಗಿದೆ. ಈಗ ಅದು ವೆಂಟಿಲೇಟರ್‌ನಲ್ಲಿದೆ. ಅದು ಏದುಸಿರು ಬಿಡುತ್ತಿದೆ. ಪ್ಲಾಸ್ಮಾ ಚಿಕಿತ್ಸೆಯಾಗಲಿ, ಹೈಡ್ರಾಕ್ಸಿಕ್ಲೋರೋಕ್ವಿನ್ ಆಗಲಿ ಅಥವಾ ರೆಮ್‌ಡೆಸಿವಿರ್ ಆಗಲಿ ಕಾಂಗ್ರೆಸ್‌ ಅನ್ನು ಉಳಿಸುವುದಿಲ್ಲ,’ ಎಂದು ಎಎಪಿ ರಾಷ್ಟ್ರೀಯ ವಕ್ತಾರ ರಾಘವ್ ಚಡ್ಡಾ ಅವರು ಕಾಂಗ್ರೆಸ್‌ ಪರಿಸ್ಥಿತಿಯನ್ನು ಗೇಲಿ ಮಾಡಿದರು.

ADVERTISEMENT

‘ಗೋವಾ, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಜನರು ಭರವಸೆಯೊಂದಿಗೆ ಕಾಂಗ್ರೆಸ್ ಪರ ಮತ ಚಲಾಯಿಸಿದ್ದರು. ಆದರೆ, ಮತ ಮತ್ತು ಶಾಸಕರನ್ನು ಅದು ಮಾರಿಕೊಂಡಿತು,’ ಎಂದು ಚಡ್ಡಾ ಆರೋಪಿಸಿದರು.

‘ಕಾಂಗ್ರೆಸ್‌ಗೆ ಭವಿಷ್ಯವಿಲ್ಲ ಅಥವಾ ಅದು ದೇಶಕ್ಕೆ ಭವಿಷ್ಯವನ್ನು ನೀಡುವುದಿಲ್ಲ. ನೀವು ಕಾಂಗ್ರೆಸ್‌ಗೆ ಮತ ಹಾಕಿದರೆ ಅದು ನಿಮ್ಮ ಮತಗಳನ್ನು ಮಾರಾಟ ಮಾಡಿಕೊಳ್ಳುವುದು ಖಚಿತ,’ ಎಂದು ಚಡ್ಡಾ ಹೇಳಿದರು.

ಪರಿಸ್ಥಿತಿಯು ಎಎಪಿಗೆ ಜವಾಬ್ದಾರಿಯನ್ನು ಒದಗಿಸಿದರೆ, ತಮ್ಮ ಪಕ್ಷವು ಅದನ್ನು ಅರ್ಥಮಾಡಿಕೊಳ್ಳುತ್ತದೆಯೇ ಎಂಬ ಪ್ರಶ್ನೆ ಇದೆ ಎಂದೂ ಚಡ್ಡಾ ಹೇಳಿದರು.

‘ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳಬಹುದೇ ಎಂಬುದನ್ನು ಸಮಯ ನಿರ್ಣಯಿಸುತ್ತದೆ. ಆದರೆ ಒಂದು ವಿಷಯವೆಂದರೆ ಎಎಪಿಗೆ ದೊಡ್ಡ ಸಂಘಟನೆಬಲ ಇಲ್ಲದೆಯೂ ಜನರು ನಮ್ಮನ್ನು ಪರ್ಯಾಯವಾಗಿ ನೋಡುತ್ತಾರೆ. ಕಾಂಗ್ರೆಸ್ ವಿನಾಶದತ್ತ ಸಾಗುತ್ತಿದೆ. ಎಎಪಿಗೆ ಬೇರೆ ಆಯ್ಕೆಗಳಿಲ್ಲ. ಸದ್ಯದ ನಿರ್ವಾತವನ್ನು ತುಂಬುವ ಮೂಲಕ ಜವಾಬ್ದಾರಿ ನಿರ್ವಹಿಸಬೇಕಾಗಿದೆ,’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.