
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಿದ್ದ ಕೆಲ ರಾಜ್ಯಗಳಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ಅರ್ಥೈಸಿಕೊಳ್ಳಲು, ಕಾಂಗ್ರೆಸ್ ಬೂತ್ ಮಟ್ಟದಲ್ಲಿ ಫಲಿತಾಂಶಗಳನ್ನು ಪರಿಶೀಲಿಸಲು ಮುಂದಾಗಿದೆ. ಈ ಮೂಲಕ ಅದು ಹೊಣೆಗಾರಿಕೆ ನಿಗದಿಪಡಿಸುವ ಮತ್ತು ಲೋಪಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ.
ಈ ಸಂಬಂಧ ಪಕ್ಷದ ಕೇಂದ್ರ 'ವಾರ್ ರೂಮ್', ದೇಶದಾದ್ಯಂತ ಬೂತ್ ಮಟ್ಟದ ಮತದಾನದ ವಿವರಗಳನ್ನು ಸಂಗ್ರಹಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
ಆಡಳಿತದಲ್ಲಿರುವ ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣದಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಪಕ್ಷಕ್ಕಿತ್ತು. ಆದರೆ ಎಲ್ಲಿ, ಯಾವ ತಪ್ಪು ಆಗಿದೆ ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿದೆ. ಹಾಗೆಯೇ ದೆಹಲಿ, ಮಧ್ಯಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಒಂದೊಂದು ಕ್ಷೇತ್ರವನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಇವುಗಳನ್ನೆಲ್ಲ ಪರಿಶೀಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ತನ್ನ ಶಕ್ತಿಗೆ ತಕ್ಕಂತೆ ವಿವಿಧ ರಾಜ್ಯಗಳಲ್ಲಿ ಏಕೆ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ ಎಂಬುದನ್ನು ತಿಳಿದು ತುರ್ತು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಶೀಘ್ರದಲ್ಲಿಯೇ ಸಭೆಗಳನ್ನು ನಡೆಸಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಘೋಷಿಸಿದ್ದಾರೆ. ಅಲ್ಲದೆ ಈ ರಾಜ್ಯಗಳಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಲು ಖರ್ಗೆ ಅವರು ಶೀಘ್ರದಲ್ಲಿಯೇ ಸಮಿತಿಯನ್ನು ರಚಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.