ADVERTISEMENT

ಪೊಲೀಸ್ ದಬ್ಬಾಳಿಕೆ ಖಂಡಿಸಿ ದೇಶದಾದ್ಯಂತ ರಾಜಭವನಗಳ ಎದುರು ಪ್ರತಿಭಟನೆ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜೂನ್ 2022, 10:08 IST
Last Updated 15 ಜೂನ್ 2022, 10:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‍ಪಕ್ಷದ ಕಾರ್ಯಕರ್ತರ ಮೇಲಿನ ಪೊಲೀಸ್ ದಬ್ಬಾಳಿಕೆ ಹಾಗೂ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪೊಲೀಸ್ ಕಾರ್ಯಾಚರಣೆಗಳನ್ನು ಖಂಡಿಸಿ ದೇಶದಾದ್ಯಂತ ರಾಜಭವನಗಳ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಬುಧವಾರಹೇಳಿದೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸತತ ಮೂರು ದಿನಗಳಿಂದ ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಇದನ್ನು ಪ್ರತಿಭಟಿಸಿ ದೆಹಲಿಯ ಇ.ಡಿ. ಕಚೇರಿ ಹಾಗೂ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇ.ಡಿ. ಕಚೇರಿಗಳ ಎದುರು ಪ್ರತಿಭಟನೆ ನಡೆಸಿದ್ದಾರೆ.

ದೆಹಲಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದರು.

ಎಐಸಿಸಿ ಕಚೇರಿಯಲ್ಲಿ ಪೊಲೀಸ್ ಕಾರ್ಯಾಚರಣೆ ಆರೋಪ:

ದೆಹಲಿಯ ಎಐಸಿಸಿ ಪ್ರಧಾನ ಕಚೇರಿಗೆ ನುಗ್ಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ದೂರಿದೆ. ಆದರೆ, ಪೊಲೀಸರು ಈ ಆರೋಪವನ್ನು ಅಲ್ಲಗಳೆದಿದ್ದಾರೆ.

‘ಎಐಸಿಸಿ ಕಚೇರಿ ಬಳಿ ಅನೇಕ ಜನ ಪೊಲೀಸರ ಮೇಲೆಯೇ ಬ್ಯಾರಿಕೇಡ್‌ಗಳನ್ನು ಎಸೆದಿದ್ದಾರೆ. ಹೀಗಾಗಿ ಸಂಘರ್ಷ ಸಂಭವಿಸಿರಬಹುದು. ಆದರೆ ಪೊಲೀಸರು ಎಐಸಿಸಿ ಕಚೇರಿಯ ಒಳ ಪ್ರವೇಶಿಸಿಲ್ಲ. ಲಾಠಿ ಚಾರ್ಜ್ ಮಾಡಿಲ್ಲ. ನಮ್ಮ ಜತೆ ಸಹಕರಿಸುವಂತೆ ಅವರಲ್ಲಿ ಮನವಿ ಮಾಡಿದ್ದೇವೆ’ ಎಂದು ವಿಶೇಷ ಎಸ್‌ಪಿ (ಕಾನೂನು ಮತ್ತು ಸುವ್ಯವಸ್ಥೆ) ಹೂಡಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.