ADVERTISEMENT

ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ: ಕಾಂಗ್ರೆಸ್‌ನಿಂದ ವರ್ಷಪೂರ್ತಿ ಕಾರ್ಯಕ್ರಮ

ಪಿಟಿಐ
Published 9 ಆಗಸ್ಟ್ 2021, 12:14 IST
Last Updated 9 ಆಗಸ್ಟ್ 2021, 12:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ (ಪಿಟಿಐ): ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವರ್ಷದ ನಿಮಿತ್ತ ಕಾಂಗ್ರೆಸ್‌ ಪಕ್ಷವು ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿ ಕಾರ್ಯದರ್ಶಿಗಳು, ರಾಜ್ಯ ಘಟಕಗಳ ಅಧ್ಯಕ್ಷರ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು, ವರ್ಷಪೂರ್ತಿ ಆಚರಣೆಗೆ ಪೂರಕವಾಗಿ ಎಲ್ಲ ರಾಜ್ಯಗಳಲ್ಲಿ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು.

ಆ.14, 15ರಂದು ಎಲ್ಲ ಜಿಲ್ಲೆಗಳಲ್ಲಿ ಸ್ವತಂತ್ರ ಸೇನಾನಿ ಮತ್ತು ಶಹೀದ್‌ ಸಮ್ಮಾನ್‌ ಕಾರ್ಯಕ್ರಮ ನಡೆಯಲಿದೆ. 14ರ ಸಂಜೆ ಸ್ವಾತಂತ್ರ್ಯ ಸೇನಾನಿಗಳು, ಕುಟುಂಬ ಸದಸ್ಯರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ADVERTISEMENT

ಈ ಕಾರ್ಯಕ್ರಮಗಳು ಆಗಸ್ಟ್ 2022ರವರೆಗೆ ನಡೆಯಲಿದೆ. ಏಳು ರಾಜ್ಯಗಳಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಆರು ರಾಜ್ಯಗಳಲ್ಲಿ ಸದ್ಯ ಬಿಜೆಪಿಯೇ ಆಡಳಿತದಲ್ಲಿದೆ. ಕ್ವಿಟ್‌ ಇಂಡಿಯಾ ಚಳವಳಿಯ ವಾರ್ಷಿಕೋತ್ಸವದ ನಿಮಿತ್ತ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷವು ಹಮ್ಮಿಕೊಂಡಿರುವ ‘ಗದ್ದಿ ಚೋಡೊ (ಅಧಿಕಾರದಿಂದ ನಿರ್ಗಮಿಸಿ) ಅಭಿಯಾನದ ಸಮಾರೋಪದಂದೇ ಪಕ್ಷದ ಪ್ರಕಟಣೆ ಹೊರಬಿದ್ದಿದೆ.

15ರಂದು ಬೆಳಿಗ್ಗೆ 7 ರಿಂದ 9ರ ನಡುವೆ ಎಲ್ಲ ಜಿಲ್ಲೆ ಮತ್ತು ಬ್ಲಾಕ್‌ ಹಂತದಲ್ಲಿ ಸ್ವಾತಂತ್ರ್ಯ ಪಥಸಂಚಲನೆ ನಡೆಯಲಿದೆ. ಅಲ್ಲದೆ, ಸ್ವಾತಂತ್ರ್ಯ ಚಳವಳಿ ಕುರಿತು ಜಾಗೃತಿ ಮೂಡಿಸಲು ಮಾಧ್ಯಮದಲ್ಲಿ ಅಭಿಯಾನ ನಡೆಸಲಿದ್ದು, ಎಲ್ಲ ಪ್ರದೇಶ ಕಾಂಗ್ರೆಸ್‌ ಘಟಕಗಳು ಪೂರಕವಾಗಿ 2 ನಿಮಿಷದ ವಿಡಿಯೊ ರೂಪಿಸಲಿವೆ ಎಂದರು.

ಇದೇ ಸಂದರ್ಭದಲ್ಲಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ವ್ಯಕ್ತಿಗತ ಸ್ವಾತಂತ್ರ್ಯ ಹತ್ತಿಕ್ಕುವುದು, ಜಾತಿ, ಧರ್ಮದ ಆಧಾರದಲ್ಲಿ ಸಮುದಾಯದ ವಿಭಜನೆ, ಸಂವಿಧಾನದ ಮೂಲತತ್ವಗಳ ಜೊತೆಗೆ ರಾಜಿಯಾಗುವುದು ನಡೆದೇ ಇದೆ. ಸ್ವಾತಂತ್ರ್ಯದ ರಕ್ಷಣೆಯ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.