ADVERTISEMENT

ಇಡಬ್ಲ್ಯೂಎಸ್‌: ನಿಲುವಿನ ಮರುಚಿಂತನೆಗೆ ಮುಂದಾದ ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 13:56 IST
Last Updated 12 ನವೆಂಬರ್ 2022, 13:56 IST
ಕಾಂಗ್ರೆಸ್‌ ಪಕ್ಷದ ಚಿಹ್ನೆ
ಕಾಂಗ್ರೆಸ್‌ ಪಕ್ಷದ ಚಿಹ್ನೆ   

ನವದೆಹಲಿ: ಎಸ್‌.ಸಿ, ಎಸ್‌.ಟಿ ಮತ್ತು ಹಿಂದುಳಿದ ವರ್ಗಗಳನ್ನು ಹೊರಗಿಟ್ಟು, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಶೇ 10ರಷ್ಟು ಮೀಸಲಾತಿ ನೀಡುವುದನ್ನು ಸುಪ್ರೀಂ ಕೋರ್ಟ್ ಈಚೆಗೆ ಎತ್ತಿ ಹಿಡಿದಿರುವುದರ ಕುರಿತಂತೆ ತನ್ನ ನಿಲುವನ್ನು ಮರುಪರಿಶೀಲಿಸಲು ಕಾಂಗ್ರೆಸ್‌ ಮುಂದಾಗಿದೆ.

ಸುಪ್ರೀಂ ಕೋರ್ಟ್‌ ತೀರ್ಪನ್ನು ಕಾಂಗ್ರೆಸ್‌ ಪಕ್ಷ ಸ್ವಾಗತಿಸಿತ್ತು. ಆದರೆ ಮಿತ್ರಪಕ್ಷಗಳಾದ ಡಿಎಂಕೆ ಮತ್ತು ಆರ್‌ಜೆಡಿ ತೀರ್ಪನ್ನು ವಿರೋಧಿಸಿರುವಂತೆಯೇ ಕಾಂಗ್ರೆಸ್‌ ಸಹ ತನ್ನ ನಿರ್ಧಾರದ ಬಗ್ಗೆ ಮರುಪರಿಶೀಲನೆಗೆ ಮುಂದಾಗಿದೆ.

‘ಸಾಮಾಜಿಕ ನ್ಯಾಯದ ಕುರಿತ ಭಾರತದ ಸುಧೀರ್ಘ ಹೋರಾಟಕ್ಕೆ ಈ ತೀರ್ಪಿನಿಂದ ಹಿನ್ನೆಡೆಯಾಗಲಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಹೇಳಿದ್ದಾರೆ. ತಮಿಳುನಾಡು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಈ ತೀರ್ಪಿನ ಕುರಿತು ವಿರೋಧ ವ್ಯಕ್ತವಾಗುತ್ತಿದೆ. ಇದೇ ಕಾರಣಕ್ಕೆ ಕಾಂಗ್ರೆಸ್‌ ತನ್ನ ನಿಲುವಿನ ಮರುಪರಿಶೀಲನೆಗೆ ಮುಂದಾಗಿದೆ.

ADVERTISEMENT

ಪಕ್ಷದಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಮುಖಂಡರು ತೀರ್ಪಿನ ‘ಸಾಮಾಜಿಕ ಮತ್ತು ರಾಜಕೀಯ ಪರಿಣಾಮ’ದ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ಜೊತೆಗೆ, ತೀರ್ಪಿನ ಕಾನೂನು ಆಯಾಮದ ಕುರಿತು ಪಿ. ಚಿದಂಬಂರಂ ಮತ್ತು ಅಭಿಷೇಕ್ ಮನು ಸಿಂಘ್ವಿ ಅಧ್ಯಯನ ನಡೆಸುತ್ತಿದ್ದಾರೆ ಎಂದು ಶನಿವಾರ ಪಕ್ಷದ ಮೂಲಗಳು ತಿಳಿಸಿವೆ.

‘ರಾಜಕೀಯ ಪರಿಣಾಮವನ್ನು ಗಮನಿಸದೆಯೇ ಪಕ್ಷವು ಆತುರಾತುರವಾಗಿ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿತು’ ಎಂದು ಪಕ್ಷದ ಮುಖಂಡರೊಬ್ಬರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.