ADVERTISEMENT

‘ರಾಹುಲ್ ಗಾಂಧಿ ರೀಲಾಂಚ್ 4.0’: ಕಾಂಗ್ರೆಸ್ ರ್‍ಯಾಲಿ ಬಗ್ಗೆ ಬಿಜೆಪಿ ವ್ಯಂಗ್ಯ

ಶೆಮಿಜ್‌ ಜಾಯ್‌
Published 4 ಸೆಪ್ಟೆಂಬರ್ 2022, 11:38 IST
Last Updated 4 ಸೆಪ್ಟೆಂಬರ್ 2022, 11:38 IST
   

ನವದೆಹಲಿ: ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಲು ಯಾರೂ ಸಿದ್ಧರಿಲ್ಲದೇ ಇರುವುದರಿಂದ ಆ ಪಕ್ಷವು ‘ರಾಹುಲ್ ಗಾಂಧಿ ರೀಲಾಂಚ್ 4.0’ ರ್‍ಯಾಲಿ ನಡೆಸುತ್ತಿದೆ ಎಂದು ಬಿಜೆಪಿ ಟೀಕಿಸಿದೆ.

ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ರ್‍ಯಾಲಿಯ ಮೂಲ ಉದ್ದೇಶ ಗಾಂಧಿ ಕುಟುಂಬವನ್ನು ರಕ್ಷಿಸುವುದಾಗಿದೆ ಎಂದು ಬಿಜೆಪಿ ವಕ್ತಾರ ರಾಜ್ಯವರ್ಧನ್ ಸಿಂಗ್ ರಾಥೋಡ್ಹೇಳಿದ್ದಾರೆ.

‘ಈ ರ್‍ಯಾಲಿಯು, ಗಾಂಧಿ ಕುಟುಂಬವನ್ನು ರಕ್ಷಿಸಲು ಮಾಡಲಾಗುತ್ತಿದೆಯೇ ಹೊರತು ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆ ಅಲ್ಲ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ಯಾವೊಬ್ಬ ನಾಯಕನೂ ಮುಂದೆ ಬರದಿರುವ ಈ ಸಂದರ್ಭದಲ್ಲಿ ರಾಜಕೀಯದಲ್ಲಿ ಹಲವು ಬಾರಿ ಲಾಂಚ್ ಆಗಿರುವ ರಾಹುಲ್ ಗಾಂಧಿಯನ್ನು ರೀಲಾಂಚ್ ಮಾಡಲಾಗುತ್ತಿದೆ’ಎಂದು ಅವರು ವ್ಯಂಗ್ಯ ಮಾಡಿದ್ದಾರೆ.

ADVERTISEMENT

‘2014ರಿಂದ ಈಚೆಗೆ ಕಾಂಗ್ರೆಸ್ ಪಕ್ಷವು ಶೇಕಡ 90ರಷ್ಟು ಚುನಾವಣೆಗಳನ್ನು ಸೋತಿದೆ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಶೇಕಡ 90ರಷ್ಟು ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿತ್ತು. ಕಾಂಗ್ರೆಸ್ ತನ್ನ ವಾಸ್ತವತೆಯನ್ನು ಮರೆತಂತಿದೆ. ಆ ಪಕ್ಷಕ್ಕೆ ಯಾವುದೇ ದೃಷ್ಟಿಕೋನ, ಪಾಲಿಸಿ ಮತ್ತು ನಾಯಕತ್ವ ಇಲ್ಲ’ಎಂದು ಕುಟುಕಿದ್ದಾರೆ.

ದೇಶದಲ್ಲಿ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್, ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಮೆಹಂಗಾಯಿ ಪರ್ ಹಲ್ಲಾ ಬೋಲ್’ರ್‍ಯಾಲಿ ನಡೆಸಿತು.

ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ದೇಶದಲ್ಲಿ ದ್ವೇಷ, ಭಯ ಸೃಷ್ಟಿಸುವ ಮೂಲಕ ದೆಶವನ್ನು ಹಿಂಬದಿಗೆ ದೂಡಲಾಗುತ್ತಿದೆ. ಬಡವರು, ಕಾರ್ಮಿಕರು ಮತ್ತು ನಿರುದ್ಯೋಗಗಳ ಹಿತಾಸಕ್ತಿ ಬಲಿಕೊಟ್ಟು ಇಬ್ಬರು ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಟೀಕಿಸಿದ್ದರು.

ರಾಹುಲ್‌ಗೆ ತಿರುಗೇಟು ನೀಡಿರುವ ರಾಜ್ಯವರ್ಧನ್, ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಅಲ್ಲಿನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಆಡಳಿತದಲ್ಲಿ ಮಹಿಳೆಯರು ಮತ್ತು ಸಂತರ ವಿರುದ್ಧದ ಅಪರಾಧ ಹೆಚ್ಚಿವೆ. ತನಿಖಾ ಸಂಸ್ಥೆಗಳು ಗಾಂಧಿ ಕುಟುಂಬಕ್ಕೆ ತನಿಖೆಗೆ ಸಮನ್ಸ್ ನೀಡಿದ್ದಾಗಲೆಲ್ಲ ಗೆಹಲೋತ್ ದೆಹಲಿಗೆ ಬರುತ್ತಾರೆ. ರಾಜಸ್ಥಾನದ ಜನರ ಹಿತಾಸಕ್ತಿ ಬದಿಗೊತ್ತಿ ಗಾಂಧಿ ಕುಟುಂಬದ ರಕ್ಷಣೆಗೆ ನಿಲ್ಲುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.