ADVERTISEMENT

ಬಿಹಾರದಲ್ಲಿನ ತಪ್ಪು ಮರುಕಳಿಸಬಾರದು: ರಾಜ್ಯ ನಾಯಕರಿಗೆ ಕಾಂಗ್ರೆಸ್‌ ಸೂಚನೆ

ಪಿಟಿಐ
Published 18 ನವೆಂಬರ್ 2025, 23:30 IST
Last Updated 18 ನವೆಂಬರ್ 2025, 23:30 IST
<div class="paragraphs"><p>ಎಸ್‌ಐಆರ್‌ ಪ್ರಕ್ರಿಯೆ ನಡೆಯುತ್ತಿರುವ ರಾಜ್ಯಗಳ ನಾಯಕರೊಂದಿಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಪಕ್ಷದ ಹಲವು ನಾಯಕರು ಮಂಗಳವಾರ ಸಭೆ ನಡೆಸಿದರು</p></div>

ಎಸ್‌ಐಆರ್‌ ಪ್ರಕ್ರಿಯೆ ನಡೆಯುತ್ತಿರುವ ರಾಜ್ಯಗಳ ನಾಯಕರೊಂದಿಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಪಕ್ಷದ ಹಲವು ನಾಯಕರು ಮಂಗಳವಾರ ಸಭೆ ನಡೆಸಿದರು

   

–ಪಿಟಿಐ ಚಿತ್ರ

ನವದೆಹಲಿ: ‘ಚುನಾವಣಾ ಆಯೋಗವು 9 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸುತ್ತಿರುವ ಎಸ್‌ಐಆರ್‌ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಿದ್ಧಪಡಿಸಲಾಗುವ ಕರಡು ಮತದಾರರ ಪಟ್ಟಿಯಲ್ಲಿನ ‘ತಪ್ಪು’ಗಳ ಬಗ್ಗೆ ಪ್ರಶ್ನೆ ಮಾಡಲೇಬೇಕು. ಬಿಹಾರದಲ್ಲಿ ಮಾಡಿದ ತಪ್ಪು ಮರುಕಳಿಸಬಾರದು’ ಎಂದು ಕಾಂಗ್ರೆಸ್‌ನ ರಾಜ್ಯ ನಾಯಕರಿಗೆ ಸೂಚಿಸಿದೆ.

ADVERTISEMENT

ಎಸ್‌ಐಆರ್‌ ಪ್ರಕ್ರಿಯೆ ನಡೆಯುತ್ತಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯಕಾರಣಿ ಸಮಿತಿಯ ಸದಸ್ಯರು ಮತ್ತು ನಾಯಕರ ಸಭೆಯನ್ನು ಮಂಗಳವಾರ ಕರೆಯಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಹಿಸಿಕೊಂಡಿದ್ದರು. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್‌ ಭಾಗಿಯಾಗಿದ್ದರು.

ಎಸ್‌ಐಆರ್‌ ಹಾಗೂ ಮತಕಳ್ಳತನದ ವಿರುದ್ಧ ದೆಹಲಿಯ ರಾಮಲೀಲಾ ಮೈದಾನದಲ್ಲಿ ಡಿಸೆಂಬರ್‌ ಆರಂಭದಲ್ಲಿ ದೊಡ್ಡ ರ್‍ಯಾಲಿ ಹಮ್ಮಿಕೊಳ್ಳುವುದಾಗಿ ಪಕ್ಷವು ತಿಳಿಸಿದೆ. ‘ಸಮಾಜದ ಆಯ್ದ ವರ್ಗಗಳ ಜನರನ್ನು ಮತದಾರರ ಪಟ್ಟಿಯಿಂದ ಅಳಿಸುವ ‘ಪಾಪದ ಮಿಷನ್‌’ ಅನ್ನು ಆಯೋಗ ಕೈಗೊಂಡಿದೆ’ ಎಂದು ಪಕ್ಷ ದೂರಿದೆ.

‘ಸಮಾಜದ ಕೆಲವು ವರ್ಗಗಳ ಮತಗಳನ್ನು ಅಳಿಸಿ ಹಾಕುವುದಕ್ಕಾಗಿಯೇ ಎಸ್‌ಐಆರ್‌ ಅನ್ನು ರೂಪಿಸಲಾಗಿದೆ. ಬಿಹಾರದಲ್ಲಿ ಇದು ನಮ್ಮ ಅನುಭವಕ್ಕೆ ಬಂದಿದೆ. ಅಸ್ಸಾಂನಲ್ಲಿ ಬೂತ್‌ ಮಟ್ಟದ ಏಜೆಂಟರನ್ನು ಎಸ್‌ಐಆರ್‌ ಪ್ರಕ್ರಿಯೆಯಿಂದ ದೂರ ಇಡಲಾಗಿದೆ. ಪ್ರಜಾಪ್ರಭುತ್ವವನ್ನು ನಾಶ ಮಾಡುವ ಪಾಪಕೃತ್ಯವಿದು’ ಎಂದು ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಹೇಳಿದರು.

ಬಿಜೆಪಿ ನೆರಳಿನಲ್ಲಿ ಎಸ್‌ಐಆರ್ ನಡೆಸಲಾಗುತ್ತಿಲ್ಲ ಎಂಬುದನ್ನು ಆಯೋಗವು ತಕ್ಷಣವೇ ಸಾಬೀತು ಮಾಡಬೇಕು. ಮತಗಳ್ಳತನ ಮಾಡಲು ಬಿಜೆಪಿಯು ಈ ಪ್ರಕ್ರಿಯೆಯನ್ನು ಅಸ್ತ್ರವಾಗಿಸಿಕೊಂಡಿದೆ
ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ಅಧ್ಯಕ್ಷ 

ರಾಜ್ಯ ನಾಯಕರಿಗೆ ಸೂಚನೆ ಏನು?

* ಕರಡು ಮತದಾರರ ಪಟ್ಟಿಯಲ್ಲಿ ಉದ್ದೇಶಪೂರ್ವಕವಾಗಿ ಯಾವುದೇ ವ್ಯಕ್ತಿಯ ಹೆಸರು ಸೇರ್ಪಡೆ ಅಥವಾ ಹೆಸರು ತೆಗೆದು ಹಾಕುವುದು ಕಂಡುಬಂದರೆ ತಕ್ಷಣವೇ ಈ ಬಗ್ಗೆ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಬೇಕು. ಬಿಹಾರದಲ್ಲಿ ಪಕ್ಷವು ಯಾವ ಆಕ್ಷೇಪಣೆಯನ್ನೂ ಸಲ್ಲಿಸಿಲ್ಲ. ಇದರಿಂದ ಆಯೋಗದ ಕೆಲಸ ಸುಗಮವಾಯಿತು. ನಾವು ಯಾವುದೇ ವಿಷಯ ಪ್ರಸ್ತಾಪಿಸಿದರೂ ಯಾವ ಪಕ್ಷವೂ ಆಕ್ಷೇಪಣೆ ಸಲ್ಲಿಸಿಲ್ಲ ಎಂದು ಆಯೋಗ ಹೇಳುತ್ತಿದೆ.

* ಆಯೋಗವು ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ ಮೇಲೆ ಆ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸುವುದಕ್ಕೆ ಕಾನೂನು ತಜ್ಞರ ತಂಡವನ್ನು ರೂಪಿಸಬೇಕು. ಅಂತಿಮ ಪಟ್ಟಿ ಸಲ್ಲಿಕೆಯಾದ ಮೇಲೆ ಎರಡನೇ ಅಥವಾ ಮೂರನೇ ಆಕ್ಷೇಪಣೆಗಳನ್ನು ಸಲ್ಲಿಸಲೂ ಇದರಿಂದ ಅನುಕೂಲವಾಗಲಿದೆ.

* ನಮ್ಮ ಕಾರ್ಯಕರ್ತರು ಬೂತ್‌ ಮಟ್ಟದ ಅಧಿಕಾರಿಗಳು ಮತ್ತು ಜಿಲ್ಲಾ/ನಗರ/ಬ್ಲಾಕ್‌ ಮಟ್ಟದ ಅಧ್ಯಕ್ಷರು ಸದಾ ಜಾಗರೂಕರಾಗಿ ಇರಬೇಕು. ‘ಸಾಕಷ್ಟು ಬೂತ್‌ ಮಟ್ಟದ ಏಜೆಂಟರನ್ನು ನಿಯೋಜಿಸಿದ್ದೇವೆ. ಇವರಿಗೆ ತರಬೇತಿಯನ್ನೂ ನೀಡಲಾಗಿದೆ’ ಎಂದು ರಾಜ್ಯ ನಾಯಕರು ಹೈಕಮಾಂಡ್‌ಗೆ ಮಾಹಿತಿ ನೀಡಿದರು.

ಸಂಘನಾತ್ಮಕ ಮತ್ತು ಕಾನೂನು ಹೋರಾಟ ಅಗತ್ಯ

‘ನ್ಯಾಯಯುತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಚುನಾವಣಾ ಆಯೋಗದ ಕರ್ತವ್ಯ. ಆದರೆ ತನ್ನ ಕರ್ತವ್ಯ ನಿರ್ವಹಿಸುವುದಕ್ಕೆ ರಾಜಕೀಯ ಪಕ್ಷಗಳನ್ನು ಅದು ಹೊಣೆಗಾರರನ್ನಾಗಿ ಮಾಡುತ್ತಿದೆ. ಎಸ್‌ಐಆರ್‌ ವಿರೋಧಿಸಲು ಪಕ್ಷವು ರಾಜಕೀಯವಾಗಿ ಸಂಘನಾತ್ಮಕವಾಗಿ ಮತ್ತು ಕಾನೂನಾತ್ಮಕವಾಗಿ ಹೋರಾಟಬೇಕಿದೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹೇಳಿದರು. ‘ನೈಜ ಮತದಾರರನ್ನು ಪಟ್ಟಿಯಿಂದ ಅಳಿಸಿ ಹಾಕುವುದಕ್ಕಾಗಿಯೇ ಅವಸರವಾಗಿ ಈ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮಾತ್ರವೇ ಸೌಕರ್ಯಗಳಿವೆ. ಸಣ್ಣ ಪಕ್ಷಗಳಿಗೆ ಇದು ಸಾಧ್ಯವಾಗುವುದಿಲ್ಲ. ಆದ್ದರಿಂದ ನಮಗೆ ಜವಾಬ್ದಾರಿ ಹೆಚ್ಚು. ಆಯೋಗದ ನ್ಯಾಯ ದೊರಕುತ್ತದೆ ಎಂದು ಯಾರೂ ನಿರೀಕ್ಷಿಸಬಾರದು. ಯಾಕೆಂದರೆ ಅದು ಒಂದು ಪಕ್ಷದ ಭಾಗವಾಗಿ ಕೆಲಸ ಮಾಡುತ್ತಿದೆ’ ಎಂದರು.

ತಮಿಳುನಾಡು: ಎಸ್‌ಐಆರ್‌ ಪ್ರಕ್ರಿಯೆಗೆ ಬಹಿಷ್ಕಾರ

ತಮಿಳುನಾಡಿನ ಫೆಡರೇಷನ್‌ ಆಪ್‌ ರೆವೆನ್ಯೂ ಅಸೋಸಿಯೇಷನ್‌ನ ಸದಸ್ಯರು ಮಂಗಳವಾರದಿಂದ ಎಸ್‌ಐಆರ್‌ ಕಾರ್ಯಕ್ಕೆ ಬಹಿಷ್ಕಾರ ಹಾಕಿದ್ದಾರೆ. ‘ಅಧಿಕ ಕಾರ್ಯದೊತ್ತಡ ಮಾನವ ಸಂಪನ್ಮೂಲ ಇಲ್ಲದಿರುವುದು ಗಡುವಿನ ಒತ್ತಡ ಮತ್ತು ಪ್ರಕ್ರಿಯೆ ನಡೆಸಲು ಸಾಕಷ್ಟು ತರಬೇತಿ ನೀಡಿಲ್ಲ’ ಎಂದು ಸದಸ್ಯರು ದೂರಿದ್ದಾರೆ. ‘ಕಂದಾಯ ಇಲಾಖೆಯ ಕೆಲಸ ಕಾರ್ಯಗಳಿಗೆ ಬಹಿಷ್ಕಾರ ಹಾಕಿಲ್ಲ. ಈ ಕೆಲಸಗಳು ಮುಂದುವರಿಸಯಲಿವೆ’ ಎಂದಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ: ಚುನಾವಣೆ ಹೊತ್ತಿನಲ್ಲಿ ನಡೆಯುವ ಎಸ್‌ಐಆರ್‌ ಪ್ರಕ್ರಿಯೆ ಪೂರ್ಣಗೊಳ್ಳಲು ಬಹಳ ಸಮಯ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈಗ ಒಂದು ತಿಂಗಳಲ್ಲಿ ಪೂರ್ಣಗೊಳಿಸಲಾಗುತ್ತಿದೆ. ಆಯೋಗದ ಅಧಿಕಾರಿಗಳ ಒತ್ತಡ ತಾಳಲಾರದೆಯೇ ಬಿಎಲ್‌ಒಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಡಿ.9ಕ್ಕೆ ಕೇರಳದಲ್ಲಿ ಮೊದಲ ಹಂತದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಇದೇ ದಿನವೇ ಅಂತಿಮ ಪಟ್ಟಿಯಯನ್ನು ನೀಡಲು ಆಯೋಗವು ಬಿಎಲ್‌ಒಗಳಿಗೆ ಸೂಚಿಸಿದೆ
ಕೆ.ಸಿ. ವೇಣುಗೋಪಾಲ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.