ನವದೆಹಲಿ: ಪೆಗಾಸಸ್ ಕುತಂತ್ರಾಂಶ ಬಳಸಿ ಬೇಹುಗಾರಿಕೆ ನಡೆಸಿರುವ ಆರೋಪದ ಕುರಿತು ತನಿಖೆ ನಡೆಸಲು ತಜ್ಞರ ಸಮಿತಿ ರಚಿಸುವ ಸುಪ್ರೀಂ ಕೋರ್ಟ್ ಆದೇಶವನ್ನು ಕಾಂಗ್ರೆಸ್ ಬುಧವಾರ ಸ್ವಾಗತಿಸಿದೆ.
ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ನುಣುಚಿಕೊಳ್ಳುವ ಮತ್ತು ಗಮನವನ್ನು ಬೇರೆಡೆಗೆ ಸೆಳೆಯುವ ಕೇಂದ್ರ ಸರ್ಕಾರದ ಪ್ರಯತ್ನಗಳನ್ನು ನ್ಯಾಯಾಲಯ ಈ ಮೂಲಕ ನಿರಾಕರಿಸಿದೆ ಎಂದು ಅದು ಹೇಳಿದೆ.
‘ಹುಸಿ-ರಾಷ್ಟ್ರೀಯತೆಯು ಎಲ್ಲೆಡೆ ಫ್ಯಾಸಿಸ್ಟ್ ಹೇಡಿಗಳ ಕೊನೆಯ ಆಶ್ರಯವಾಗಿದೆ’ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.
‘ರಾಷ್ಟ್ರೀಯ ಭದ್ರತೆ ಹೆಸರಿನಲ್ಲಿ ನುಣುಚಿಕೊಳ್ಳಲು, ತಪ್ಪಿಸಿಕೊಳ್ಳಲು ಮತ್ತು ಗಮನವನ್ನು ಬೇರೆಡೆ ಸೆಳೆಯಲು ಮೋದಿ ಸರ್ಕಾರ ನಡೆಸಿದ ಪ್ರಯತ್ನಗಳ ಹೊರತಾಗಿಯೂ, ಪೆಗಾಸಸ್ ದುರ್ಬಳಕೆಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ತಜ್ಞರ ಸಮಿತಿ ರಚನೆಗೆ ಹೊರಡಿಸಿರುವ ಆದೇಶವನ್ನು ಸ್ವಾಗತಿಸುತ್ತೇವೆ. ಸತ್ಯಮೇವ ಜಯತೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.