ADVERTISEMENT

ಸಂವಿಧಾನ ದಿನ: ಎರಡು ದಿನ ಚರ್ಚೆಗೆ ಅವಕಾಶ ಕೋರಿದ ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 14:21 IST
Last Updated 26 ನವೆಂಬರ್ 2024, 14:21 IST
.
.   

ನವದೆಹಲಿ: ಸಂವಿಧಾನ ಅಳವಡಿಸಿಕೊಂಡ 75ನೇ ವರ್ಷಾಚರಣೆ ಸಂದರ್ಭದಲ್ಲಿ ಸಂವಿಧಾನಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ವಿರೋಧ ಪಕ್ಷದ ನಾಯಕರಾದ ರಾಹುಲ್‌ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಮತ್ತು ರಾಜ್ಯಸಭೆಯ ಸಭಾಪತಿ ಜಗದೀಪ ಧನಕರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಂಜೆ ನಡೆದ ಕಾಂಗ್ರೆಸ್‌ ಸಂಸದೀಯ ಕಾರ್ಯತಂತ್ರದ ಗುಂಪಿನ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಪತ್ರ ಬರೆಯಲಾಗಿದೆ.

ಲೋಕಸಭೆಯಲ್ಲಿ ಕಾಂಗ್ರೆಸ್‌ ಉಪ ನಾಯಕ ಗೌರವ್‌ ಗೊಗೊಯ್‌, ಮುಖ್ಯ ಸಚೇತಕ ಕೋಡಿಕ್ಕುನ್ನಿಲ್‌ ಸುರೇಶ್‌ ಮತ್ತು ಸಚೇತಕ ಮಾಣಿಕಂ ಟ್ಯಾಗೋರ್‌ ಅವರು ಬಿರ್ಲಾ ಅವರನ್ನು ಭೇಟಿ ಮಾಡಿ, ಲೋಕಸಭೆಯಲ್ಲಿ ಈ ಕುರಿತು ಚರ್ಚೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಚರ್ಚೆಗೆ ಅವಕಾಶ ಒದಗಿಸಿದರೆ, ಸಂಸದರು ತಮ್ಮ ಸಂವೇದನೆ ಮತ್ತು ಬದ್ಧತೆಗಳನ್ನು ಪ್ರಸ್ತುತ ಪಡಿಸಲು ಸಾಧ್ಯವಾಗುತ್ತದೆ ಎಂದು ಟ್ಯಾಗೋರ್‌ ಈ ವೇಳೆ ತಿಳಿಸಿದರು ಎಂದು ಮೂಲಗಳು ಹೇಳಿವೆ.

‘ಬಿ.ಆರ್‌.ಅಂಬೇಡ್ಕರ್‌ ಅವರ 125ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಸುಮಾರು 13 ಗಂಟೆಗಳವರೆಗೆ ಚರ್ಚೆ ನಡೆದಿದೆ. ಕ್ವಿಟ್‌ ಇಂಡಿಯಾ ಚಳವಳಿಯ 75ನೇ ವಾರ್ಷಿಕೋತ್ಸವದ ವೇಳೆಯೂ ಚರ್ಚೆ ನಡೆಸಲಾಗಿದೆ. ಅದೇ ರೀತಿ ಈ ವಿಶೇಷ ಸಂದರ್ಭದಲ್ಲಿಯೂ ಚರ್ಚೆಗೆ ಅವಕಾಶ ಒದಗಿಸಬೇಕು ಎಂದು ಆಗ್ರಹಿಸುತ್ತೇವೆ’ ಎಂಬುದಾಗಿ ಟ್ಯಾಗೋರ್‌ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.