ADVERTISEMENT

ನಿರ್ದಿಷ್ಟ ದಾಳಿ ಬಗ್ಗೆ ಅತಿಯಾದ ಪ್ರಚಾರ ಅನವಶ್ಯಕ: ನಿವೃತ್ತ ಸೇನಾಧಿಕಾರಿ ಹೂಡಾ

ಏಜೆನ್ಸೀಸ್
Published 8 ಡಿಸೆಂಬರ್ 2018, 5:27 IST
Last Updated 8 ಡಿಸೆಂಬರ್ 2018, 5:27 IST
   

ಚಂಡೀಗಢ: ಗಡಿ ನಿಯಂತ್ರಣ ರೇಖೆಯ ಸಮೀಪ ಭಾರತೀಯ ಸೇನೆ ನಿರ್ದಿಷ್ಟ ದಾಳಿ ನಡೆಸಿ ಎರಡು ವರ್ಷಗಳು ಕಳೆದಿವೆ. ಇಂದಿಗೂ ನಿರ್ದಿಷ್ಟ ದಾಳಿಯ ಬಗೆಗೆ ದೇಶದಲ್ಲಿ ಚರ್ಚೆ ಅನಿಯಂತ್ರಿತ. ಈ ಕುರಿತು ಶುಕ್ರವಾರ ಮಾತನಾಡಿರುವ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಡಿ.ಎಸ್‌.ಹೂಡಾ, 'ಗಳಿಸಿದ ಯಶಸ್ಸಿನ ಬಗ್ಗೆ ಪ್ರಾರಂಭದಲ್ಲಿ ಹರ್ಷಚಿತ್ತರಾಗಿರುವುದು ಸಹಜ. ಆದರೆ, ಕಾರ್ಯಾಚರಣೆಯ ಬಗೆಗೆ ನಿರಂತರವಾಗಿರುವ ಪ್ರಚಾರ ಅನವಶ್ಯಕ’ ಎಂದಿದ್ದಾರೆ.

ಇಲ್ಲಿ ಶುಕ್ರವಾರ ನಡೆದ ಸೇನಾ ಸಾಹಿತ್ಯ ಉತ್ಸವ 2018ರಲ್ಲಿ ‘ಗಡಿದಾಟಿ ನಡೆಸುವ ಕಾರ್ಯಾಚರಣೆ ಮತ್ತು ನಿರ್ದಿಷ್ಟ ದಾಳಿ’ ಕುರಿತಾದ ಚರ್ಚೆಯಲ್ಲಿ ಹೂಡಾ ಮಾತನಾಡಿದರು.ಉರಿ ಸೇನಾ ಶಿಬಿರದ ಮೇಲೆ ನಡೆದ ಉಗ್ರರರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ 2016ರ ಸೆಪ್ಟೆಂಬರ್‌ 29ರಂದು ನಿರ್ದಿಷ್ಟ ದಾಳಿ ಕಾರ್ಯಾಚರಣೆ ನಡೆಸಿದಾಗ ಲೆಫ್ಟಿನೆಂಟ್ ಜನರಲ್‌ ಹೂಡಾಉತ್ತರ ಭಾಗದ ಸೇನಾ ಕಮಾಂಡರ್‌ ಆಗಿದ್ದರು.

ಮಾಜಿ ಯೋಧರು, ಸೇನಾ ಕಮಾಂಡರ್‌ಗಳು ಭಾಗಿಯಾಗಿದ್ದ ಚರ್ಚೆಯಲ್ಲಿ ಸೇನಾ ಕಾರ್ಯಾಚರಣೆಗಳನ್ನು ರಾಜಕೀಯಗೊಳಿಸುತ್ತಿರುವುದರ ವಿರುದ್ಧ ಕಿಡಿಕಾರಿದ್ದಾರೆ. ಪಂಜಾಬ್‌ ರಾಜ್ಯಪಾಲ ವಿ.ಪಿ.ಸಿಂಗ್‌ ಬದನೋರ್‌ ಸಹ ಚರ್ಚೆಯಾಗಿ ಭಾಗವಹಿಸಿದ್ದರು.

ADVERTISEMENT

’ನಿರ್ದಿಷ್ಟ ದಾಳಿಯ ಬಗ್ಗೆ ಆಗಿರುವುದಕ್ಕಿಂತಲೂ ಅತಿ ಹೆಚ್ಚಿನ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಸೇನಾ ಕಾರ್ಯಾಚರಣೆ ಮುಖ್ಯವಾಗಿತ್ತು ಹಾಗೂ ಅದು ನಡೆಯಿತು. ಇದೀಗ ಕಾರ್ಯಾಚರಣೆ ವಿಷಯ ರಾಜಕೀಯಗೊಂಡಿದೆ, ಅದು ಸರಿಯೋ ತಪ್ಪೋ ಎಂಬುದನ್ನು ರಾಜಕಾರಣಿಗಳ ಬಳಿಯೇ ಕೇಳಬೇಕು’ ಎಂದು ಹೂಡಾ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ನಿರ್ದಿಷ್ಟ ದಾಳಿ ಕುರಿತು ಸಭಿಕರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜನರಲ್‌ ಹೂಡಾ, 'ಇಂಥ ದಾಳಿಗಳು ಚತುರತೆಯ ಜತೆಗೆ ಕೌಶಲತೆಯನ್ನೂ ಒಳಗೊಂಡಿರುತ್ತದೆ. ಇದು ಶತ್ರುತ್ವದ ನೈತಿಕತೆಗೆ ತಡೆಯುಂಟು ಮಾಡುತ್ತದೆ’ ಎಂದು ಹೇಳಿದ್ದಾರೆ.

ಇರಾಕ್‌ನ ಪರಮಾಣು ನೆಲೆಗಳ ಮೇಲೆ ಇಸ್ರೇಲ್‌ 1981ರಲ್ಲಿ ನಡೆಸಿದ ವಾಯುಪಡೆ ದಾಳಿ ಹಾಗೂ ಅದರಿಂದ ಉಂಟಾದ ಹಾನಿಯನ್ನು ಉದಾಹರಿಸಿದ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಎನ್‌.ಎಸ್‌.ಬ್ರಾರ್‌, ಮುಂದೆ ಇಂಥ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಮುನ್ನ ಶತ್ರುವಿನ ಮೇಲೆ ಬೀರುವ ದೂರಗಾಮಿ ಪರಿಣಾಮದ ಬಗ್ಗೆ ಖಚಿತಪಡಿಸಿಕೊಳ್ಳುವುದು ಅಗತ್ಯ ಎಂದಿದ್ದಾರೆ.

ರಾಷ್ಟ್ರಸೇವೆಯಲ್ಲಿ ಮಡಿದ ವೀರ ಯೋಧರ ಸ್ಮರಣಾರ್ಥ ಎರಡು ನಿಮಿಷಗಳ ಮೌನ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.