ADVERTISEMENT

ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆ ಇಂದು

ಒಬಿಸಿ ಗುರುತಿಸಲು ರಾಜ್ಯಗಳಿಗೆ ಅಧಿಕಾರ ನೀಡಲು ಕ್ರಮ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 20:19 IST
Last Updated 8 ಆಗಸ್ಟ್ 2021, 20:19 IST
ಸಂಸತ್‌
ಸಂಸತ್‌   

ನವದೆಹಲಿ: ಮುಂಗಾರು ಅಧಿವೇಶವು ನಾಲ್ಕನೇ ಹಾಗೂ ಕೊನೆಯ ವಾರಕ್ಕೆ ಕಾಲಿರಿಸಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಕಂದಕ ಇನ್ನಷ್ಟು ಹೆಚ್ಚಾಗಿದೆ. ಈ ನಡುವೆ, ಇತರ ಹಿಂದುಳಿದ ವರ್ಗಗಳನ್ನು (ಒಬಿಸಿ) ಗುರುತಿಸುವ ರಾಜ್ಯಗಳ ಅಧಿಕಾರವನ್ನು ಮರಳಿ ಕೊಡುವಮಹತ್ವದ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲುಸರ್ಕಾರ ಸಜ್ಜಾಗಿದೆ.

ಸಂವಿಧಾನದ 127ನೇ ತಿದ್ದುಪಡಿ ಮಸೂದೆಯು ಸೋಮವಾರ ಲೋಕಸಭೆಯಲ್ಲಿ ಮಂಡನೆಯಾಗಲಿದ್ದು, ಪೆಗಾಸಸ್ ಪ್ರಕರಣದ ಬಗ್ಗೆ ಚರ್ಚೆಗೆ ಒತ್ತಾಯಿಸಿ ಪಟ್ಟುಹಿಡಿದು ನಡೆಸುತ್ತಿರುವ ಪ್ರತಿಭಟನೆಯನ್ನು ಪ್ರತಿಪಕ್ಷಗಳು ನಿಲ್ಲಿಸುವ ಸಾಧ್ಯತೆಯಿದೆ. ಕಲಾಪಕ್ಕೆ ಅಡ್ಡಿಪಡಿಸಿದಲ್ಲಿ, ಒಬಿಸಿ ವರ್ಗ ಗುರುತಿಸುವ ಅಧಿಕಾರ ರಾಜ್ಯಗಳಿಗೆ ಕೊಡಲು ಪ್ರತಿಪಕ್ಷಗಳು ಅಡ್ಡಿಯಾದವು ಎಂದು ಸರ್ಕಾರ ಹೇಳಬಹುದು. ಇದು ಉತ್ತರಪ್ರದೇಶ ಮತ್ತು ಪಂಜಾಬ್‌ ವಿಧಾನಸಭೆಗೆ ಕೆಲವೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಪರಿಣಾಮ ಬೀರಬಹುದು ಎಂಬ ಕಳವಳ ವಿರೋಧ ಪಕ್ಷ
ಗಳಲ್ಲಿ ಇದೆ.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಪ್ರತಿಪಕ್ಷಗಳ ಸದನ ನಾಯಕರುಸೋಮವಾರ ಬೆಳಿಗ್ಗೆ 10 ಗಂಟೆಗೆ ಸಭೆ ಸೇರಲಿದ್ದಾರೆ. ಈ ಮಸೂದೆಗೆ ಸಂಬಂಧಿಸಿ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬುದು ಈ ಸಭೆಯಲ್ಲಿ ನಿರ್ಧಾರ ಆಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಅವರು ಮೊದಲು ಮಸೂದೆ ಮಂಡಿಸಲಿ. ನಂತರ ನಾವು ಏನು ಮಾಡುತ್ತೇವೆ ಎಂಬುದನ್ನು ವಿವರಿಸುತ್ತೇವೆ. ನಾಯಕರು ಸೋಮವಾರ ಸಭೆ ಸೇರಿ ಮಹತ್ವದ ಕಾರ್ಯತಂತ್ರವನ್ನು ನಿರ್ಧರಿಸುತ್ತಾರೆ’ ಎಂದು ವಿರೋಧ ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.