ADVERTISEMENT

ಮೊರ್ಬಿ ಅವಘಡ: ಅನರ್ಹರಿಗೆ ಸೇತುವೆ ನವೀಕರಣ ಗುತ್ತಿಗೆ- ಪೊಲೀಸ್

ಏಜೆನ್ಸೀಸ್
Published 2 ನವೆಂಬರ್ 2022, 19:45 IST
Last Updated 2 ನವೆಂಬರ್ 2022, 19:45 IST
   

ಮೊರ್ಬಿ: ಮೊರ್ಬಿ ತೂಗುಸೇತುವೆ ನವೀಕರಣ ಗುತ್ತಿಗೆ ಯನ್ನು ಅನರ್ಹರಿಗೆ ನೀಡಲಾಗಿತ್ತು. ಅಂತಹ ಕಾಮಗಾರಿ ನಡೆಸಲು ಅರ್ಹ ರಲ್ಲದ ಅದೇ ಗುತ್ತಿಗೆದಾರರಿಗೆ ಎರಡು ಬಾರಿ ನವೀಕರಣ ಗುತ್ತಿಗೆಯನ್ನು ನೀಡಲಾಗಿತ್ತು ಎಂದು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ತೂಗುಸೇತುವೆ ದುರಂತದ ವಿಧಿವಿಜ್ಞಾನ ಪರೀಕ್ಷೆ ನಡೆಸಿದ್ದ ತಜ್ಞರ ತಂಡವು, ಪರೀಕ್ಷೆಯ ವರದಿ ಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ 9 ಆರೋಪಿಗಳನ್ನು ಮಂಗಳವಾರ ರಾತ್ರಿ ಇಲ್ಲಿನ ಮುಖ್ಯ ಸೆಷನ್ಸ್‌ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು. ಈ ವೇಳೆ ಸರ್ಕಾರಿ ವಕೀಲರು ಪೊಲೀಸರು ನೀಡಿದ್ದ ವರದಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು.

ADVERTISEMENT

ವಿಚಾರಣೆಯಲ್ಲಿ ಹಾಜರಿದ್ದ ಒರೆವಾ ಕಂಪನಿಯ ಬಂಧಿತ ಸಿಬ್ಬಂದಿ ದೀಪಕ್‌ ಪರೇಕ್‌, ‘ಇಂತಹ ದುರದೃಷ್ಟಕರ ಘಟನೆ ನಡೆದದ್ದು ದೇವರ ಇಚ್ಛೆ’ ಎಂದು ಹೇಳಿದ್ದಾರೆ.

‘ಒರೆವಾ ಕಂಪನಿಯು ಸೇತುವೆಯ ನಿರ್ವಹಣೆಯ ಗುತ್ತಿಗೆ ಪಡೆದು ಕೊಂಡಿತ್ತು. ನವೀಕರಣದ ಹೊಣೆಯೂ ಅದೇ ಕಂಪನಿಯದ್ದಾಗಿತ್ತು.ನವೀಕರಣ ಕಾಮಗಾರಿಯನ್ನು ಒರೆವಾ ಕಂಪನಿಯು ಬೇರೆ ಕಂಪನಿಗೆ ಹೊರಗುತ್ತಿಗೆ ನೀಡಿತ್ತು. 2007ರಲ್ಲೂ ಅದೇ ಗುತ್ತಿಗೆದಾರರಿಗೆ ಸೇತುವೆಯ ನವೀಕರಣದ ಗುತ್ತಿಗೆ ನೀಡಲಾಗಿತ್ತು. ಎರಡೂ ಬಾರಿ ಅವರು ಸೇತುವೆಯ ಪ್ಲಾಟ್‌ಫಾರಂ ಬದಲಿಸುವ ಕೆಲಸ ಬಿಟ್ಟು ಬೇರೇನನ್ನೂ ಮಾಡಿಲ್ಲ’ ಎಂದು ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

‘ಈ ಬಾರಿಯ ನವೀಕರಣದ ವೇಳೆ ಸೇತುವೆಯ ಕೇಬಲ್‌ಗಳನ್ನೂ ಬದಲಿಸಿಲ್ಲ. ಕೇಬಲ್‌ಗಳು ಹಳೆಯದಾಗಿ ದ್ದವು ಮತ್ತು ಅವು ತುಕ್ಕು ಹಿಡಿದಿದ್ದವು.ನವೀಕರಣದ ವೇಳೆ ಕೇಬಲ್‌ಗಳಿಗೆ ಬಣ್ಣ ಬಳಿದು, ಹೊಳಪು ನೀಡಲಾಗಿದೆಯಷ್ಟೆ. ಅಲ್ಲದೆ ಈ ಬಾರಿ ನಾಲ್ಕು ಎಳೆಯ ಅಲ್ಯೂಮಿನಿಯಂ ಫಲಕಗಳನ್ನು ಬಳಸಿ ಪ್ಲಾಟ್‌ಫಾರಂ ಹಾಕಲಾಗಿದ್ದು, ಅವುಗಳ ತೂಕ ಹೆಚ್ಚು. ತೂಕ ಹೆಚ್ಚಾದ್ದರಿಂದ ಮತ್ತು ಕೇಬಲ್‌ಗಳು ದುರ್ಬಲವಾಗಿದ್ದರಿಂದ ಭಾರ ತಡೆಯಲಾಗದೆ ಅವು ತುಂಡಾಗಿವೆ. ಕೇಬಲ್‌ ತುಂಡಾದ ಜಾಗದಲ್ಲೇ ತುಕ್ಕು ಹಿಡಿದಿತ್ತು ಎಂದು ವಿಧಿ ವಿಜ್ಞಾನ ಪರೀಕ್ಷೆಯ ವರದಿಯಲ್ಲಿ ವಿವರಿಸಲಾಗಿದೆ’ ಎಂದು ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ನವೀಕರಣದ ವೇಳೆ ಕೇಬಲ್‌ಗಳನ್ನೂ ಬದಲಿಸಲು ಸೂಚಿಸಲಾಗಿತ್ತೇ ಎಂಬ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರಾಗಲೀ, ಮೊರ್ಬಿ ನಗರ ಪಾಲಿಕೆ ಅಧಿಕಾರಿಗಳಾಗಲೀ ಈ ಬಗ್ಗೆ ಮಾಹಿತಿ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.