ADVERTISEMENT

ಚಿಕಿತ್ಸೆ ಪಡೆಯುವಾಗಲೇ ಲೇಖಕಿ ಫರ್ಹಾತ್ ಖಾನ್‌ ಬಂಧನ

ಆಕ್ಷೇಪಾರ್ಹ ‘ಅಡಕ’ ಕುರಿತು ಎಬಿವಿಪಿ ದೂರು * ಪ್ರಾಚಾರ್ಯ, ಪ್ರೊಫೆಸರ್‌ಗೆ ಜಾಮೀನು ನಿರಾಕರಣೆ

ಪಿಟಿಐ
Published 8 ಡಿಸೆಂಬರ್ 2022, 13:36 IST
Last Updated 8 ಡಿಸೆಂಬರ್ 2022, 13:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭೋಪಾಲ್/ಇಂದೋರ್: ಲೇಖಕಿ ಡಾ.ಫರ್ಹಾತ್ ಖಾನ್‌ ಅವರನ್ನು ಮಧ್ಯಪ್ರದೇಶದ ಪೊಲೀಸರು ಗುರುವಾರ ಪುಣೆಯ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ನಡೆಸುತ್ತಿದ್ದಾಗ ಬಂಧಿಸಿದ್ದಾರೆ.

ಡಾ.ಫರ್ಹಾತ್ ಅವರು ‘ಕಲೆಕ್ಟಿವ್‌ ವಯಲೆನ್ಸ್ ಅಂಡ್ ಕ್ರಿಮಿನಲ್‌ ಜಸ್ಟೀಸ್ ಸಿಸ್ಟಮ್’ ಕೃತಿಯ ಕರ್ತೃ. ‘ಕೃತಿಯಲ್ಲಿ ಆರ್‌ಎಸ್‌ಎಸ್‌ ಮತ್ತು ಹಿಂದೂಗಳ ವಿರುದ್ಧ ಆಕ್ಷೇಪಾರ್ಹ ಅಡಕಗಳಿವೆ. ಇದನ್ನೇ ಇಂದೋರ್‌ನಲ್ಲಿನ ಸರ್ಕಾರಿ ನವೀನ್‌ ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ‘ ಎಂದು ಎಬಿವಿಪಿ ದೂರು ನೀಡಿತ್ತು.

ಲೇಖಕಿ ಬಂಧನವನ್ನು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್‌ ಮಿಶ್ರಾ ದೃಢಪಡಿಸಿದ್ದಾರೆ. ಪೊಲೀಸರ ಪ್ರಕಾರ, ಲೇಖಕಿ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದು, ನಿಯಮಿತವಾಗಿ ಡಯಾಲಿಸಿಸ್‌ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

‘ಲೇಖಕಿಯ ಇನ್ನೊಂದು ಕೃತಿಯೂ ಆಕ್ಷೇಪಾರ್ಹ ಅಂಶಗಳನ್ನು ಒಳಗೊಂಡಿದೆಯೇ ಎಂದು ಪರಿಶೀಲನೆ ನಡೆದಿದೆ. ಇದ್ದರೆ, ಈ ಪ್ರಕರಣದ ಜೊತೆಗೆ ಅದರ ತನಿಖೆಯು ನಡೆಯಲಿದೆ’ ಎಂದು ಗೃಹ ಸಚಿವರು ತಿಳಿಸಿದರು.

ಇಂದೋರ್‌ನ ಕಾನೂನು ಕಾಲೇಜಿನ ವಿದ್ಯಾರ್ಥಿ, ಎಬಿವಿಪಿ ನಾಯಕ ಲಕ್ಕಿ ಅಡಿವಾಳ್, ‘ಕೃತಿಯಲ್ಲಿ ಆಕ್ಷೇಪಾರ್ಹ ಅಂಶಗಳಿವೆ’ ಎಂದು ಆರೋಪಿಸಿದ್ದು ಲೇಖಕಿ, ಕೃತಿ ಪ್ರಕಾಶನ ಸಂಸ್ಥೆ ಅಮರ್‌ ಲಾ ಪಬ್ಲಿಕೇಷನ್, ಕಾಲೇಜಿನ ಪ್ರಾಚಾರ್ಯ ಡಾ.ಇನಮ್ ಉರ್ ರೆಹಮಾನ್, ಪ್ರೊಫೆಸರ್ ಮಿರ್ಜಾ ಮೋಜಿಜ್‌ ಬೇಗ್‌ ವಿರುದ್ಧ ದೂರು ನೀಡಿದ್ದರು. ಉಲ್ಲೇಖಿತ ಕೃತಿಯನ್ನು ಕಾಲೇಜಿನ ಗ್ರಂಥಾಲಯದಲ್ಲಿಯೂ ಇಡಲಾಗಿತ್ತು.

ಲೇಖಕಿ ಇಂದೋರ್ ಮೂಲದವರು. ಮೊದಲು ಇವರನ್ನು ಪುಣೆಯಲ್ಲಿ ಪತ್ತೆ ಮಾಡಿದ್ದ ಪೊಲೀಸರು, ನೋಟಿಸ್ ಜಾರಿ ಮಾಡಿದ್ದರು. ‘ತನಿಖೆಗೆ ಸಹಕರಿಸಬೇಕು, ಆರೋಪಪಟ್ಟಿ ದಾಖಲಿಸುವಾಗ ಕೋರ್ಟ್‌ನಲ್ಲಿ ಹಾಜರಿರಬೇಕು ಎಂದು ಆಗ ತಿಳಿಸಲಾಗಿತ್ತು’ ಎಂದು ಡಿಸಿಪಿ ರಾಜೇಶ್‌ ಕುಮಾರ್ ಸಿಂಗ್ ಅವರು ತಿಳಿಸಿದ್ದಾರೆ.

ಎಬಿವಿಪಿ ಮುಖಂಡನ ದೂರು ಆಧರಿಸಿ ಮಧ್ಯಪ್ರದೇಶದ ಶಿಕ್ಷಣ ಇಲಾಖೆಯು ಕೃತಿ ಪರಿಶೀಲನೆಗೆ ಏಳು ಸದಸ್ಯರ ಸಮಿತಿ ರಚಿಸಿತ್ತು. ಸಮಿತಿಯು 250 ವಿದ್ಯಾರ್ಥಿಗಳು, ಬೋಧಕರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ‘ಸಮಿತಿ ಇನ್ನೂ ವರದಿ ಸಲ್ಲಿಸಬೇಕಿದೆ’ ಎಂದು ಉನ್ನತ ಶಿಕ್ಷಣ ಇಲಾಖೆಯ ಆಯುಕ್ತ ಕರ್ಮವೀರ್‌ ಶರ್ಮಾ ತಿಳಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವು ಪ್ರಾಚಾರ್ಯ ಮತ್ತು ಪ್ರೊಫೆಸರ್ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು. ‘ಸ್ಥಳೀಯ ನ್ಯಾಯಾಲಯದ ತೀರ್ಮಾನವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು’ ಎಂದು ಅವರ ವಕೀಲ ಅಭಿನವ್ ಧಾನೋತ್ಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.