
ಹೈದರಾಬಾದ್: ‘ಆಂಧ್ರ ಪ್ರದೇಶ ಮುಸಲ್ಮಾನರೇತರ ಬಾಲಕರಿಗೂ ‘ಸುನ್ನತಿ’ಯನ್ನು ನಿಯಮಿತ ವೈದ್ಯಕೀಯ ವಿಧಾನದ ಮೂಲಕ ಮಾಡಲಾಗುತ್ತಿದ್ದು, ಕೋಮು ಕಾರ್ಯಸೂಚಿಯನ್ನು ಮುನ್ನಡೆಸುವ ಸಂಘಟಿತ ಪ್ರಯತ್ನವಾಗಿದೆ’ ಎಂದು ಸಿಬಿಐನ ನಿವೃತ್ತ ನಿರ್ದೇಶಕ ಎಂ.ನಾಗೇಶ್ವರ ರಾವ್ ಕಳವಳ ವ್ಯಕ್ತಪಡಿಸಿದ್ದಾರೆ.
‘ಈ ವಿಷಯದಲ್ಲಿ ವೈದ್ಯಕೀಯ ಹಾಗೂ ಕಾನೂನಿನ ವಿಚಾರಗಳ ಕುರಿತು ಪರಿಶೀಲನೆ ನಡೆಸಲಾಗುವುದು’ ಎಂದು ರಾಜ್ಯ ಸರ್ಕಾರ ತಿಳಿಸಿದೆ.
‘ತೆಲುಗುದೇಶಂ ನೇತೃತ್ವದ ಮೈತ್ರಿ ಸರ್ಕಾರದ ಆಡಳಿತದಲ್ಲಿಯೂ ಸುನ್ನತಿ ಪ್ರಕ್ರಿಯೆಗಳು ಹೆಚ್ಚುತ್ತಿರುವ ಬೆಳವಣಿಗೆಯು ತೀವ್ರ ಕಳವಳ ಉಂಟುಮಾಡಿದೆ’ ಎಂದು ಆಂಧ್ರ ಪ್ರದೇಶದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಸತ್ಯ ಕುಮಾರ್ ಯಾದವ್ ಅವರಿಗೆ ಪತ್ರ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
‘ಸುನ್ನತಿ ಮಾಡುವುದರಿಂದ ವೈದ್ಯಕೀಯವಾಗಿ ಲಾಭವಿದೆ ಎಂದು ಭಾವಿಸಿರುವ ಹಲವು ವೈದ್ಯರು ಮುಸಲ್ಮಾನರೇತರ ಬಾಲಕರಿಗೂ ಈ ರೀತಿ ಮಾಡುವಂತೆ ಸಲಹೆ ನೀಡಿ, ಶಸ್ತ್ರಚಿಕಿತ್ಸೆ ನಡೆಸುತ್ತಿರುವುದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ವೈದ್ಯಕೀಯ ಶಿಕ್ಷಣ ಹಾಗೂ ತರಬೇತಿಯ ಹೆಸರಿನಲ್ಲಿ ತಪ್ಪು ಮಾಹಿತಿ ಹರಡಲಾಗುತ್ತಿದ್ದು, ವಿಜ್ಞಾನದ ಆಚರಣೆ ಹೆಸರಿನಲ್ಲಿ ನಿರ್ದಿಷ್ಟ ಧರ್ಮದ ಕಾರ್ಯಸೂಚಿಯನ್ನು ಜಾರಿಗೊಳಿಸುವ ಸಂಘಟಿತ ಪ್ರಯತ್ನವಾಗಿದೆ’ ಎಂದು ಪತ್ರದಲ್ಲಿ ದೂರಿದ್ದಾರೆ.
ಮಧ್ಯಪ್ರವೇಶಕ್ಕೆ ಆಗ್ರಹ: ‘ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಈ ಪದ್ಧತಿಯ ಕುರಿತಂತೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಂವಿಧಾನಿಕ ಸಮಿತಿ ರಚಿಸಬೇಕು’ ಎಂದು ನಾಗೇಶ್ವರರಾವ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.
‘ಅಗತ್ಯ ಬಿದ್ದರೆ ಅಧಿಕಾರಿಗಳು 10 ವರ್ಷ ಅಥವಾ ಅದಕ್ಕಿಂತ ಹಿಂದಿನ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಬೇಕು. ವೈದ್ಯಕೀಯ ಪಠ್ಯಕ್ರಮಗಳಲ್ಲಿಯೂ ಇದನ್ನು ಅಳವಡಿಸಲಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.
ಪತ್ರದ ಕುರಿತು ಪ್ರತಿಕ್ರಿಯಿಸಿರುವ ಸಚಿವ ಸತ್ಯ ಕುಮಾರ್ ಯಾದವ್, ‘ಸಿಬಿಐನ ಮಾಜಿ ಮುಖ್ಯಸ್ಥರು ಸಮಸ್ಯೆ ಕುರಿತು ಸರ್ಕಾರದ ಗಮನಸೆಳೆದಿರುವುದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಸರ್ಕಾರವು ಆಧುನಿಕ ವೈದ್ಯಕೀಯ ಪದ್ಧತಿ, ನೈತಿಕ ಮಾನದಂಡ ಹಾಗೂ ಕೋಮು ಸಾಮರಸ್ಯ ಕಾಪಾಡಲು ಬದ್ಧವಾಗಿದೆ. ಆರೋಗ್ಯ ಇಲಾಖೆಯು ಈ ವಿಚಾರದ ಕುರಿತಂತೆ ವೈದ್ಯಕೀಯ ನಿಯಮಾವಳಿಗಳು ಹಾಗೂ ಕಾನೂನಿನ ಅವಕಾಶಗಳ ಕುರಿತು ಪರಿಶೀಲನೆ ನಡೆಸಿ, ಅಗತ್ಯ ಬಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.