ADVERTISEMENT

ಊರು ಸೇರಲು ನೂರು ಸಂಕಟ; ವಲಸೆ ಕಾರ್ಮಿಕರ ನೋವಿನ ಚಿತ್ರಗಳು

ಕೊರೊನಾ ಲಾಕ್‌ಡೌನ್‌ ಪರಿಣಾಮ

​ಪ್ರಜಾವಾಣಿ ವಾರ್ತೆ
Published 19 ಮೇ 2020, 1:17 IST
Last Updated 19 ಮೇ 2020, 1:17 IST
ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವ ಮೊದಲು ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ದೆಹಲಿಯಲ್ಲಿ ರೈಲು ನಿಲ್ದಾಣಕ್ಕೆ ಬಸ್‌ನಲ್ಲಿ ಹೊರಡುವ ಮುನ್ನ ಪರೀಕ್ಷೆಗೆ ಒಳಗಾಗಲು ಅಂತರ ಕಾಯ್ದುಕೊಳ್ಳದೆ ವಲಸೆ ಕಾರ್ಮಿಕರು ತಮ್ಮ ಕುಟುಂಬಗಳೊಂದಿಗೆ ನಿಂತಿದ್ದರು  –ಪಿಟಿಐ ಚಿತ್ರ
ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವ ಮೊದಲು ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ದೆಹಲಿಯಲ್ಲಿ ರೈಲು ನಿಲ್ದಾಣಕ್ಕೆ ಬಸ್‌ನಲ್ಲಿ ಹೊರಡುವ ಮುನ್ನ ಪರೀಕ್ಷೆಗೆ ಒಳಗಾಗಲು ಅಂತರ ಕಾಯ್ದುಕೊಳ್ಳದೆ ವಲಸೆ ಕಾರ್ಮಿಕರು ತಮ್ಮ ಕುಟುಂಬಗಳೊಂದಿಗೆ ನಿಂತಿದ್ದರು  –ಪಿಟಿಐ ಚಿತ್ರ   

ದುಡಿಮೆಗಾಗಿ ಬೇರೆಬೇರೆ ರಾಜ್ಯಗಳಿಗೆ ಹೋಗಿರುವ ಲಕ್ಷಾಂತರ ಕಾರ್ಮಿಕರು ಲಾಕ್‌ಡೌನ್‌ನಿಂದಾಗಿ ಉದ್ಯೋಗ, ವರಮಾನ ಇಲ್ಲದೆ ಅನ್ನ ನೀರಿಲ್ಲದೆ ಕಂಗೆಡುವಂತಹ ಸ್ಥಿತಿ ಎದುರಾಗಿದೆ. ಸರ್ಕಾರವು ಅವರಿಗಾಗಿ ವಿಶೇಷ ರೈಲುಗಳನ್ನು ಆರಂಭಿಸಿದ್ದರೂ ಎಲ್ಲರಿಗೂ ಅವಕಾಶ ಲಭಿಸಿಲ್ಲ. ಆದ್ದರಿಂದ ಹಲವರು ಬೇರೆಬೇರೆ ವಾಹನಗಳನ್ನು ಹತ್ತಿ ತಮ್ಮೂರಿನತ್ತ ಪ್ರಯಾಣ ಆರಂಭಿಸಿದ್ದಾರೆ. ಹೀಗೆ ಪ್ರಾಣವನ್ನೇ ಒತ್ತೆ ಇಟ್ಟು ಊರಿನ ಹಾದಿ ತುಳಿದಿರುವ ಕಾರ್ಮಿಕರ ಕತೆಗಳು ಮನಕರಗಿಸುವಂತಿವೆ...

ಊರು ಸೇರಲು ಮಾಂಗಲ್ಯ ಸರ ಮಾರಾಟ

ಲಾಕ್‌ಡೌನ್‌ನಲ್ಲಿ ಐವತ್ತು ದಿನಗಳನ್ನು ಕಳೆದಿದ್ದ ಸರ್ವೇಶ್‌ ಕುಮಾರ್‌, ಅಂದು ಮಾಲೀಕರನ್ನು ಭೇಟಿಮಾಡಿ, ‘ನಾನು ಊರಿಗೆ ಹೋಗಬೇಕು, ಬಾಕಿ ವೇತನವನ್ನಾದರೂ ಕೊಡಿ’ ಎಂದು ಮನವಿ ಮಾಡಿದರು.

ADVERTISEMENT

ಮಾಲೀಕನಿಂದ ಬೈಗುಳ ಸಿಕ್ಕಿತೇ ವಿನಾ ಬಿಡಿಕಾಸೂ ಸಿಗಲಿಲ್ಲ. ಕೆಲಸ ಅರಸಿಕೊಂಡು ರಾಜಸ್ಥಾನಕ್ಕೆ ಬಂದಿದ್ದ ಸರ್ವೇಶ್‌ಗೆ ಹಣವಿಲ್ಲದೆ ಅಲ್ಲಿ ಬದುಕಿ ಉಳಿಯುವುದು ಸಾಧ್ಯವೇ ಇರಲಿಲ್ಲ. ಆದ್ದರಿಂದ ತನ್ನ ಹುಟ್ಟೂರಾದ ಬಿಹಾರದ ಅರರಿಯಾಗೆ ಹೋಗಲು ನಿರ್ಧರಿಸಿದ್ದರು. ಕಾಸಿಲ್ಲದೆ ಊರಿನ ಪ್ರಯಾಣ ಮಾಡುವುದು ಹೇಗೆ ಎಂಬುದು ಚಿಂತೆಯಾಗಿತ್ತು. ಅಂದು ಅವರಿಗೆ ಕರೆ ಮಾಡಿದ್ದ ಪತ್ನಿಯು, ‘ರಿಪೇರಿ ಮಾಡಿಸಲೆಂದು ತೆಗೆದುಕೊಂಡು ಹೋಗಿರುವ ನನ್ನ ಮಾಂಗಲ್ಯಸರವನ್ನು ಮಾರಿ ಒಂದು ಸೈಕಲ್‌ ಖರೀದಿಸಿ, ಅದರಲ್ಲಿ ಊರಿಗೆ ಬನ್ನಿ’ ಎಂಬ ಸಲಹೆ ನೀಡಿದರು.

‘ಸುಮಂಗಲಿಗೆ ಮಂಗಳಸೂತ್ರ ಎಷ್ಟು ಮಹತ್ವದ್ದು ಎಂಬುದು ಗೊತ್ತಿಲ್ಲವೇ’ ಎಂದು ಸರ್ವೇಶ್‌ನ ಪತ್ನಿಯನ್ನು ಅತ್ತೆ ಮಾವ ಪ್ರಶ್ನಿಸಿ
ದ್ದರು. ‘ಪತಿಯೇ ಇಲ್ಲವಾದಲ್ಲಿ ಮಾಂಗಲ್ಯ ಸರಕ್ಕೆ ಬೆಲೆಯಾದರೂ ಏನು’ ಎಂದು ಮರು ಪ್ರಶ್ನಿಸುವ ಮೂಲಕ ಆಕೆಯು ಪರಿಸ್ಥಿತಿಯ ಗಂಭೀರತೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಕೊನೆಗೆ ಪತ್ನಿಯ ಸಲಹೆಯಂತೆ ಸರ್ವೇಶ್‌ ಅವರು ಮಂಗಳಸೂತ್ರವನ್ನು ಮಾರಿ, ಬಂದ ಹಣದಲ್ಲಿ ಸೈಕಲ್‌ ಖರೀದಿಸಿ 1,400 ಕಿ.ಮೀ. ದೂರದ ಪ್ರಯಾಣ ಆರಂಭಿಸಿದ್ದಾರೆ.

ಒಂಟಿಕಾಲಿನ ಪಯಣ

ಮಧ್ಯಪ್ರದೇಶದ ಸತ್ನಾದಿಂದ ಕಾಲ್ನಡಿಗೆ ಆರಂಭಿಸಿರುವ ಅರವಿಂದ್‌ ಕುಮಾರ್‌ ಅವರ ಕತೆ ಮನಕರಗಿಸುವಂಥದ್ದು. ಅಂಗವಿಕಲರಾದ ಅರವಿಂದ್‌, ಒಂದು ಕೈಯಲ್ಲಿ ಕೋಲು ಹಿಡಿದು ಒಂಟಿಕಾಲಿನಲ್ಲೇ ಪಟ್ನಾದತ್ತ ನಡಿಗೆ ಆರಂಭಿಸಿದ್ದಾರೆ. 900 ಕಿ.ಮೀ. ದೂರದ ಪ್ರಯಾಣಕ್ಕೆ ಒಬ್ಬ ಸ್ನೇಹಿತ ಅವರಿಗೆ ನೆರವಾಗಿದ್ದಾರೆ. ಇಬ್ಬರೂ ಜತೆಯಾಗಿ ಸುಮಾರು 600 ಕಿ.ಮೀ. ಕ್ರಮಿಸಿದ್ದಾರೆ. ಊರು ಸೇರಲು ಇನ್ನೂ 300 ಕಿ.ಮೀ. ನಡೆಯಬೇಕಾಗಿದೆ.

ಬದುಕಿನ ಈಜು

ಸಂಕಷ್ಟದ ಸ್ಥಿತಿಯಲ್ಲಿ ಮನುಷ್ಯ ಎಂಥ ಅಪಾಯವನ್ನಾದರೂ ಎದುರುಹಾಕಿಕೊಳ್ಳಲು ಸಿದ್ಧನಾಗುತ್ತಾನೆಎಂಬುದಕ್ಕೆ ಪಶ್ಚಿಮ ಬಂಗಾಳದ ಬರ್ಧಮಾನ್‌ ಜಿಲ್ಲೆಯ ಚಿನ್ನಾಭರಣ ವ್ಯಾಪಾರಿ ಸಂಜಯ್‌ ಪಾಲ್‌ ಉದಾಹರಣೆ.

40 ದಿನಗಳ ಲಾಕ್‌ಡೌನ್‌ನಿಂದಾಗಿ ಅವರ ಉಳಿತಾಯವೆಲ್ಲ ಖಾಲಿಯಾಗಿತ್ತು. ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ಬಹುತೇಕ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ, ಜೀವನ ಮರಳಿ ಹಳಿಗೆ ಬರುತ್ತದೆ ಎಂದು ಅವರು ಭಾವಿಸಿದರು. ಮರುದಿನ ಮುಂಜಾನೆಯೇಅಂಗಡಿ ತೆರೆಯಲು ಹೊರಟರು. ಅಂಗಡಿ ಇರುವುದು ಹೂಗ್ಲಿ ನದಿಯ ಇನ್ನೊಂದು ದಂಡೆಯಲ್ಲಿರುವ ಶಾಂತಿಪುರದಲ್ಲಿ. ವ್ಯಾಪಾರಕ್ಕೆ ಅವಕಾಶ ನೀಡಿದ್ದರೂ ದೋಣಿ ಸಂಚಾರಕ್ಕೆ ಸರ್ಕಾರ ಅವಕಾಶ ನೀಡಿರಲಿಲ್ಲ, ಆದ್ದರಿಂದ ನದಿಯ ಇನ್ನೊಂದು ತೀರಕ್ಕೆ ಹೋಗುವುದು ಸಾಧ್ಯವಿರಲಿಲ್ಲ.

ಬದುಕು ಸಾಗಿಸಲು ವ್ಯಾಪಾರ ಆರಂಭಿಸುವುದು ಅನಿವಾರ್ಯವಾಗಿದ್ದರಿಂದ, ಈಜಿ ನದಿ ದಾಟುವ ನಿರ್ಧಾರಕ್ಕೆ ಸಂಜಯ್‌ ಅವರು ಬರುತ್ತಾರೆ. ಮೊದಲು ಬಾಳೆ ದಿಂಡಿನ ತೆಪ್ಪ ಮಾಡಿ ಇನ್ನೊಂದು ತೀರಕ್ಕೆ ಹೋಗುವ ಚಿಂತನೆ ಮಾಡುತ್ತಾರೆ. ಆದರೆ ಅದು ಅಪಾಯಕಾರಿ ಎಂದು ತಿಳಿದು, ಟ್ಯೂಬ್‌ ಸಹಾಯದಿಂದ ನದಿ ದಾಟಲು ನಿರ್ಧರಿಸಿದರು.

ಕೆಲವು ದಿನಗಳಿಂದ ಅವರು, ಇನ್ನೊಂದು ಜತೆ ಬಟ್ಟೆಗಳನ್ನು ತಮ್ಮ ಜತೆಗೆ ಒಯ್ಯುತ್ತಿದ್ದು, ಬಟ್ಟೆ ಹಾಗೂ ಅಂಗಡಿಯ ಕೀಲಿಯನ್ನು ಭದ್ರವಾಗಿ ದೇಹಕ್ಕೆ ಕಟ್ಟಿಕೊಂಡು, ಟ್ಯೂಬ್‌ ಸಹಾಯದಿಂದ ಈಜಿ ಇನ್ನೊಂದು ದಡ ಸೇರಿ ಅಂಗಡಿಯನ್ನು ತಲುಪುತ್ತಿದ್ದಾರೆ. ‘ಇದು ಅಪಾಯಕಾರಿ ಎಂಬುದು ಗೊತ್ತಿದೆ. ಆದರೆ ನನ್ನ ಗಳಿಕೆಯಿಂದಲೇ ಕುಟುಂಬ ನಡೆಯಬೇಕಾಗಿರುವುದರಿಂದ ಬೇರೆ ದಾರಿಯೇ ಇಲ್ಲದಾಗಿದೆ’ ಎಂದು ಸಂಜಯ್‌ ಪಾಲ್‌ ಹೇಳುತ್ತಾರೆ.

ಶವಗಳೊಂದಿಗೆ ಪ್ರಯಾಣ

ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದ ಲಾರಿಯು ಉತ್ತರಪ್ರದೇಶದ ಔರಿಯಾದಲ್ಲಿ ಅಪಘಾತಕ್ಕೆ ಒಳಗಾಗಿ ಹಲವು ಕಾರ್ಮಿಕರು ಸಾವನ್ನಪ್ಪಿದ ಕಹಿ ನೆನಪು ಮಾಸುವುದಕ್ಕೂ ಮುನ್ನ, ಘಟನೆಗೆ ಸಂಬಂಧಿಸಿದ ಅಮಾನವೀಯ ಮುಖವೊಂದು ಬಯಲಾಗಿದೆ. ಅಪಘಾತದಲ್ಲಿ ಪ್ರಾಣ ಬಿಟ್ಟವರ ಶವವನ್ನು ಸಾಗಿಸಿದ ಟ್ರಕ್‌ನಲ್ಲೇ,ಬದುಕುಳಿದಿರುವ ಕಾರ್ಮಿಕರನ್ನು ಕಳುಹಿಸಲಾಗಿದೆ.

ಟ್ರಕ್‌ನ ಒಂದು ಮೂಲೆಯಲ್ಲಿ ವಲಸೆ ಕಾರ್ಮಿಕರು ಕುಳಿತಿರುವುದು ಹಾಗೂ ಇನ್ನೊಂದು ಮೂಲೆಯಲ್ಲಿ ಪ್ಲಾಸ್ಟಿಕ್‌ ಚೀಲಗಳಲ್ಲಿ ಸುತ್ತಿದ್ದ ಶವಗಳನ್ನು ಇಟ್ಟಿರುವುದನ್ನು ತೋರಿಸುವ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೊ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರವು ಶವಗಳನ್ನು ಸಾಗಿಸಲು ಆಂಬುಲೆನ್ಸ್‌ ವ್ಯವಸ್ಥೆ ಮಾಡಿದೆ.

‘ಶವಗಳನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿಡಲಾಗಿತ್ತೇ ವಿನಾ ಐಸ್‌ನಲ್ಲಿ ಇಟ್ಟಿರಲಿಲ್ಲ. ಅವುಗಳಿಂದ ಕೆಟ್ಟ ವಾಸನೆ ಬರುತ್ತಿದ್ದುದರಿಂದ ವಾಹನವನ್ನು ಚಲಾಯಿಸುವುದೂ ಕಷ್ಟವಾಗಿತ್ತು’ ಎಂದು ಟ್ರಕ್‌ ಚಾಲಕರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.