ADVERTISEMENT

ಭಾರತದಲ್ಲಿ ಕೊರೊನಾ 4ನೇ ಅಲೆ ಬರಲ್ಲ: ಸಾಂಕ್ರಾಮಿಕ ರೋಗ ತಜ್ಞ ಜೆಕೊಬ್‌ ಜಾನ್‌

ಪಿಟಿಐ
Published 8 ಮಾರ್ಚ್ 2022, 11:03 IST
Last Updated 8 ಮಾರ್ಚ್ 2022, 11:03 IST
ಬೆಂಗಳೂರಿನ ಮೆಜೆಸ್ಟಿಕ್‌ ಬಳಿ ಗಂಟಲಿನ ದ್ರವ ಮಾದರಿ ಸಂಗ್ರಹಿಸುತ್ತಿರುವ ಆರೋಗ್ಯ ಸಿಬ್ಬಂದಿ. ಪ್ರಜಾವಾಣಿ ಚಿತ್ರ/ಪುಷ್ಕರ್‌.ವಿ
ಬೆಂಗಳೂರಿನ ಮೆಜೆಸ್ಟಿಕ್‌ ಬಳಿ ಗಂಟಲಿನ ದ್ರವ ಮಾದರಿ ಸಂಗ್ರಹಿಸುತ್ತಿರುವ ಆರೋಗ್ಯ ಸಿಬ್ಬಂದಿ. ಪ್ರಜಾವಾಣಿ ಚಿತ್ರ/ಪುಷ್ಕರ್‌.ವಿ   

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್‌ನ 3ನೇ ಅಲೆ ಅಂತ್ಯಗೊಂಡಿದೆ. 4ನೇ ಅಲೆ ಬರುವ ಸಾಧ್ಯತೆ ಇಲ್ಲ ಎಂದು ಪ್ರಸಿದ್ಧ ಸಾಂಕ್ರಾಮಿಕ ರೋಗ ತಜ್ಞ ಡಾ. ಟಿ. ಜೇಕಬ್‌ ಜಾನ್‌ ತಿಳಿಸಿದ್ದಾರೆ.

ಜಾನ್‌ ಅವರು 'ಇಂಡಿಯನ್‌ ಕೌನ್ಸಿಲ್‌ ಫಾರ್‌ ಮೆಡಿಕಲ್‌ ರೀಸರ್ಚ್ಸ್‌ ಸೆಂಟರ್‌ ಆಫ್‌ ಅಡ್ವಾನ್ಸ್ಡ್‌ ರೀಸರ್ಚ್‌'ನ ರೋಗಸೂಕ್ಷ್ಮಾಣುಗಳ ವೈಜ್ಞಾನಿಕ ಅಧ್ಯಯನ (ವೈರಾಲಜಿ) ವಿಭಾಗದ ಮಾಜಿ ನಿರ್ದೇಶಕರು.

'ಒಂದುವೇಳೆ ಅನಿರೀಕ್ಷಿತ ರೂಪಾಂತರ ವಿಭಿನ್ನವಾಗಿ ವರ್ತಿಸದೆ ಇದ್ದರೆ ಭಾರತದಲ್ಲಿ 4ನೇ ಅಲೆ ಬರುವುದಿಲ್ಲ ಎಂಬ ಪೂರ್ಣ ವಿಶ್ವಾಸವಿದೆ' ಎಂದು ಜಾನ್‌ ಹೇಳಿದ್ದಾರೆ.

ADVERTISEMENT

ರಾಷ್ಟ್ರದಲ್ಲಿ ಕೊರೊನಾ 3ನೇ ಅಲೆ ಚಾಲ್ತಿಯಲ್ಲಿದ್ದಾಗ ಜನವರಿ 21ರಂದು 3,47,254 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದವು. ಬಳಿಕ ಇಳಿಮುಖವಾಗಿದೆ. ಮಂಗಳವಾರ ರಾಷ್ಟ್ರದಲ್ಲಿ ದಾಖಲಾದ ಹೊಸ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ 3,993ಕ್ಕೆ ಇಳಿಕೆಯಾಗಿದೆ. ಇದು ಕಳೆದ 662 ದಿನಗಳಲ್ಲೇ ಕಡಿಮೆ ಸಂಖ್ಯೆಯಾಗಿದೆ.

'ಕನಿಷ್ಠ 4 ವಾರಗಳ ಕಾಲ ಕೇವಲ ಸಣ್ಣ ಏರಿಳಿತಗಳೊಂದಿಗೆ ಕಡಿಮೆ ಮತ್ತು ಸ್ಥಿರವಾದ ದೈನಂದಿನ ಸಂಖ್ಯೆಯ ಪ್ರಕರಣಗಳು ದಾಖಲಾಗುವುದನ್ನು ಎಂಡೆಮಿಕ್‌ ಹಂತ ಎನ್ನಲಾಗುತ್ತದೆ. ಭಾರತದ ಎಲ್ಲ ರಾಜ್ಯಗಳಲ್ಲಿ ಕನಿಷ್ಠ ನಾಲ್ಕು ವಾರಗಳಿಂದ ಕೊರೊನಾ ಸೋಂಕು ಎಂಡೆಮಿಕ್‌ ಹಂತದಲ್ಲಿದೆ. ಹಾಗಾಗಿ ಈ ಭರವಸೆಯನ್ನು ನೀಡುತ್ತಿದ್ದೇನೆ' ಎಂದು ಜಾನ್‌ ವಿವರಿಸಿದ್ದಾರೆ.

'ಎಂಡೆಮಿಕ್‌ ಹಂತ ಎಂಬುದು ಸೋಂಕಿನ ಜೊತೆಗೆ ಜೀವಿಸುವುದನ್ನು ಮನುಕುಲ ರೂಢಿಸಿಕೊಳ್ಳುವುದಾಗಿದೆ. ಇದು ಮನುಕುಲವನ್ನು ಆವರಿಸುವ ಸಾಂಕ್ರಾಮಿಕರೋಗದ ಹಂತಕ್ಕಿಂತ ವಿಭಿನ್ನವಾಗಿದೆ' ಎಂದು ಜಾನ್ ಹೇಳಿದ್ದಾರೆ.

ರಾಷ್ಟ್ರದಲ್ಲಿ 3ನೇ ಅಲೆ ಬರುವುದಿಲ್ಲ ಎಂದು ಮೊದಲು ಸಾಂಕ್ರಾಮಿಕ ರೋಗ ತಜ್ಞರು ಮತ್ತಿತರರು ವಿಶ್ವಾಸ ವ್ಯಕ್ತಪಡಿಸಿದ್ದರ ಬಗ್ಗೆ ಜಾನ್‌ ಅವರನ್ನು ಪ್ರಶ್ನಿಸಿದಾಗ, 'ಓಮೈಕ್ರಾನ್‌ನಿಂದ 3ನೇ ಅಲೆ ಚಾಲ್ತಿಗೆ ಬಂತು. ಇಂತಹದ್ದೊಂದು ರೂಪಾಂತರ ಪ್ರತ್ಯಕ್ಷವಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಹಾಗಾಗಿ ತಜ್ಞರ ಅಭಿಪ್ರಾಯದಂತೆ ಸಂಭವಿಸಲಿಲ್ಲ. ಈಗಲೂ ಆಲ್ಫಾ, ಬೀಟಾ, ಗಾಮಾ ಅಥವಾ ಓಮೈಕ್ರಾನ್‌ನಿಂದ ಅನಿರೀಕ್ಷಿತ ರೂಪಾಂತರ ಸಂಭವಿಸದಿದ್ದರೆ 4ನೇ ಅಲೆ ಇರುವುದಿಲ್ಲ' ಎಂದು ಜಾನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.