ನವದೆಹಲಿ: ಭಾರತದಲ್ಲಿ ಕೋವಿಡ್ 19 ಸೋಂಕು ಪ್ರಕರಣದ ಸಂಖ್ಯೆ 73ಕ್ಕೇರಿದೆ. ಚೀನಾದ ಹುಬೈನಲ್ಲಿ ಇದೇ ಮೊದಲ ಬಾರಿ ಪ್ರಕರಣದ ಸಂಖ್ಯೆಯಲ್ಲಿ ಒಂದಂಕಿ ಮಾತ್ರ ಏರಿಕೆಯಾಗಿದೆ. ಭಾರತಕ್ಕೆ ಬರುವ ಎಲ್ಲ ಪ್ರವಾಸಿಗಳ ವೀಸಾವನ್ನು ಏಪ್ರಿಲ್ 15ರವರೆಗೆ ಭಾರತ ತಡೆಹಿಡಿದಿದೆ. ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್‌ನ್ನು ಸರ್ವವ್ಯಾಪಿ ವ್ಯಾಧಿ ಎಂದು ಹೇಳಿದೆ. ವರದಿಗಳ ಪ್ರಕಾರ ಏಪ್ರಿಲ್ 15ರವರೆಗೆ ಯಾವುದೇ ವಿದೇಶಿ ಆಟಗಾರರು ಐಪಿಎಲ್ ಕ್ರೀಡೆಗೆ ಲಭ್ಯವಿರುವುದಿಲ್ಲ.
ಕೇಂದ್ರ ಆರೋಗ್ಯ ಸಚಿವಾಲದ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ದೇಶದಲ್ಲಿ ಕೊರೊನಾ ಪ್ರಕರಣ ಸ್ಥಿತಿಗತಿಗಳ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ್ದು, ಜನರು ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು
- ಸಾಗರೋತ್ತರ ಭಾರತೀಯ ಪ್ರಜೆ (ಒಸಿಐ) ಕಾರ್ಡ್ ಹೊಂದಿರುವ ಎಲ್ಲರಿಗೂ ಉಚಿತ ವೀಸಾ ಸೌಲಭ್ಯ ನೀಡುತ್ತಿದ್ದು ಅವರನ್ನು 2020 ಏಪ್ರಿಲ್ 15ರ ವರೆಗೆ ತಡೆಹಿಡಿಯಲಾಗುವುದು. ಈ ಸೇವೆ 2020 ಮಾರ್ಚ್ 13ರಂದು 12 ಗಂಟೆಯಿಂದ ಜಾರಿಗೆ ಬರಲಿದೆ.
- ಭಾರತದ 12 ರಾಜ್ಯಗಳಲ್ಲಿ ಕೋವಿಡ್ 19 ಸೋಂಕು ಇರುವ 73 ಪ್ರಕರಣಗಳು ವರದಿಯಾಗಿವೆ. ಇವರ ಪೈಕಿ 56 ಮಂದಿ ಭಾರತೀಯರು ಮತ್ತು 17 ಮಂದಿ ವಿದೇಶಿಯರಾಗಿದ್ದಾರೆ.
-ಇರಾನ್‌ನಲ್ಲಿರುವ ಭಾರತೀಯರನ್ನು ಕರೆತರಲು 3 ವಿಮಾನಗಳು ಸಜ್ಜಾಗಿವೆ. ಮಾರ್ಚ್ 13ರಂದು ಮೊದಲ ವಿಮಾನ ಹೊರಡಲಿದ್ದು 130-140 ಪ್ರಯಾಣಿಕರನ್ನು ಇದು ಮುಂಬೈಗೆ ಕರೆತರಲಿದೆ. ಎರಡನೇ ವಿಮಾನ ಮಾರ್ಚ್ 15ಕ್ಕೆ ಮತ್ತು ಮೂರನೇ ವಿಮಾನ ಮಾರ್ಚ್ 16 ಅಥವಾ 17ಕ್ಕೆ ಹೊರಡಲಿದೆ.
- ಇಲ್ಲಿಯವರಿಗೆ ಭಾರತದ 900 ಪ್ರಜೆಗಳನ್ನು ಮತ್ತುಇತರ ದೇಶಗಳ 48 ಮಂದಿಯನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಇದರಲ್ಲಿ ಮಾಲ್ಡೀವ್ಸ್, ಮ್ಯಾನ್ಮಾರ್, ಬಾಂಗ್ಲಾದೇಶ, ಚೀನಾ. ಅಮೆರಿಕ, ಮಡಗಾಸ್ಕರ್, ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ ಮತ್ತು ಪೆರು ದೇಶದವರಿದ್ದಾರೆ.
-ದೇಶದಾದ್ಯಂತ 52 ಪರೀಕ್ಷಾ ಕೇಂದ್ರ ಮತ್ತು 56 ಮಾದರಿ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಈಗಾಗಲೇ ಸರಿಸುಮಾರು 1 ಲಕ್ಷ ಟೆಸ್ಟಿಂಗ್ ಕಿಟ್‌ಗಳು ಲಭ್ಯ ಇದೆ. ಹೆಚ್ಚುವರಿ ಟೆಸ್ಟಿಂಗ್ ಕಿಟ್‌ಗಳಿಗಾಗಿ ಆರ್ಡರ್ ನೀಡಲಾಗಿದೆ.
-ಸದಾ ಮಾಸ್ಕ್ ಧರಿಸಬೇಕೆಂದಿಲ್ಲ.ವ್ಯಕ್ತಿಗಳು ಇನ್ನೊಬ್ಬ ವ್ಯಕ್ತಿಯಿಂದ ನಿರ್ದಿಷ್ಟ ಅಂತರ ಕಾಪಾಡುವುದಾದರೆ ಮಾಸ್ಕ್ ಅಗತ್ಯವಿಲ್ಲ. ಭಯ ಪಡುವ ಅಗತ್ಯವಿಲ್ಲ.
-ಕೊರೊನಾ ಸೋಂಕು ಬಗ್ಗೆ ಅಧ್ಯಯನ ನಡೆಯುತ್ತಿದೆ. ಇದರ ಬಗ್ಗೆ ಖಚಿತವಾದ ಅಧ್ಯಯನ ನಡೆದಿಲ್ಲ. ಅಧಿಕ ಉಷ್ಣತೆಯಲ್ಲಿ ಈ ವೈರಸ್ ಸಾಯುತ್ತದೆ ಎಂದು ಹೇಳಲಾಗುತ್ತಿದ್ದರೂ ಇದು ದೃಢಪಟ್ಟಿಲ್ಲ.
- ಸದ್ಯ ಭಾರತದಲ್ಲಿ ಸಾಮೂಹಿಕವಾಗಿ ಈ ರೋಗ ಹರಡಿಲ್ಲ. ಕೆಲವೊಂದು ಪ್ರಕರಣಗಳಲ್ಲಿ ದೇಶದಿಂದ ಹೊರಗಿನಿಂದ ಬಂದವರಿಂದ ಅವರ ಕುಟುಂಬದ ಸದಸ್ಯರಿಗೆ ರೋಗ ಹರಡಿದೆ.
ಕೊರೊನಾ ವೈರಸ್ ಸೋಂಕು ತಗಲಿದವರನ್ನು ಪ್ರತ್ಯೇಕವಾಗಿರಿಸಿದ್ದು, 11 ಮಂದಿಯನ್ನು ಹೀಗೆ ಇರಿಸಲಾಗಿದೆ. ಇದಕ್ಕಾಗಿ ಲಸಿಕೆ ಕಂಡುಹಿಡಿಯಲು 1.5 ರಿಂದ 2 ವರ್ಷಗಳೇ ಬೇಕಾಗಬಹುದು ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.