ADVERTISEMENT

ಕೇರಳಕ್ಕೆ ಹೊಸ ರೂಪದ ಕೊರೊನಾ ವೈರಸ್‌ ಕಾಲಿಡುವ ಭೀತಿ: ಸಚಿವೆ ಶೈಲಜಾ ಟೀಚರ್ ಆತಂಕ

ಏಜೆನ್ಸೀಸ್
Published 23 ಡಿಸೆಂಬರ್ 2020, 15:53 IST
Last Updated 23 ಡಿಸೆಂಬರ್ 2020, 15:53 IST
ಕೇರಳದ ಆರೋಗ್ಯ ಸಚಿವೆ ಶೈಲಜಾ ಟೀಚರ್‌
ಕೇರಳದ ಆರೋಗ್ಯ ಸಚಿವೆ ಶೈಲಜಾ ಟೀಚರ್‌   

ತಿರುವನಂತಪುರಂ: ಯುರೋಪಿನ ಕೆಲ ರಾಷ್ಟ್ರಗಳಲ್ಲಿ ಪತ್ತೆ ಆಗಿರುವ ಹೊಸ ರೂಪದ ಕೊರೊನಾ ವೈರಸ್‌ ಸೋಂಕು ತಮ್ಮ ರಾಜ್ಯದಲ್ಲಿಯೂ ಹರಡುವ ಆತಂಕವಿದೆ ಎಂದು ಕೇರಳದ ಆರೋಗ್ಯ ಸಚಿವೆ ಶೈಲಜಾ ಟೀಚರ್‌ ಹೇಳಿದ್ದಾರೆ.

ಕೊರೊನಾ ವೈರಸ್‌ನ ಎರಡನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಕೇರಳ ಸರ್ಕಾರವು ತೀವ್ರ ಕಟ್ಟೆಚ್ಚರ ವಹಿಸಿದೆ ಎಂದಿರುವ ಅವರು, 'ಹೊಸ ರೂಪ ಪಡೆದಿರುವ ಕೊರೊನಾ ವೈರಸ್‌ ಕೇರಳಕ್ಕೂ ಬರಬಹುದು ಎಂಬ ಆತಂಕವಿದೆ. ಆ ಹಿನ್ನೆಲೆಯಲ್ಲಿ ಬ್ರಿಟನ್‌, ಇಟಲಿ ಸೇರಿದಂತೆ ಯುರೋಪ್‌ ರಾಷ್ಟ್ರಗಳಿಂದ ಬರುವ ಎಲ್ಲಾ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲೇ ಪರೀಕ್ಷೆಗೆ ಒಳಪಡಿಸಲಾಗುವುದು. ಅವರು ತಮ್ಮ ಮನೆಗಳಲ್ಲಿ ಪ್ರತ್ಯೇಕವಾಗಿರುವುದನ್ನೂ ಸಹ ಖಚಿತಪಡಿಸಿಕೊಳ್ಳಲಾಗುವುದು' ಎಂದು ಹೇಳಿದ್ದಾರೆ.

ಮಂಗಳವಾರ ಬ್ರಿಟನ್‌ನಿಂದ ವಿಮಾನವೊಂದು ಕೇರಳಕ್ಕೆ ಬಂದಿದೆ. ಅದರಲ್ಲಿ ಬಂದಿಳಿದ ಪ್ರಯಾಣಿಕರ ಪರೀಕ್ಷೆಯನ್ನು ಮಾಡಿದ್ದೇವೆ. ಫಲಿತಾಂಶ ಬರಬೇಕಿದೆ ಎಂದು ಶೈಲಜಾ ಟೀಚರ್‌ ಮಾಹಿತಿ ನೀಡಿದ್ದಾರೆ.

ADVERTISEMENT

ಹೊಸ ರೂಪದ ಕೊರೊನಾ ವೈರಸ್‌ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿರುವ ಶೈಲಜಾ ಟೀಚರ್‌, 'ಕೇರಳದ ಬಂದರುಗಳಲ್ಲಿ ಕಣ್ಗಾವಲನ್ನು ಹೆಚ್ಚಿಸಲಾಗುವುದು. ವಿಮಾನ ನಿಲ್ದಾಣದಲ್ಲಿ ಕೋವಿಡ್ -19 ತಪಾಸಣೆ ವ್ಯವಸ್ಥೆಯನ್ನು ಬಲಪಡಿಸಲಾಗುವುದು' ಎಂದೂ ತಿಳಿಸಿದ್ದಾರೆ.

ಬ್ರಿಟನ್‌ನಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್‌ ಪತ್ತೆಯಾಗಿದೆ. ಅದು ಅತ್ಯಂತ ವೇಗವಾಗಿ ಹರಡುತ್ತಿದ್ದು, ಪರಿಸ್ಥಿತಿ ಕೈಮೀರಿದೆ ಎಂದು ಬ್ರಿಟನ್‌ ಸರ್ಕಾರ ಹೇಳಿದೆ.

ಹೊಸ ಸ್ವರೂಪದ ವೈರಸ್‌ ಹರಡುವುದನ್ನು ತಡೆಗಟ್ಟಲು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.