ADVERTISEMENT

ಕೊರೊನಾ ಮರುಸೋಂಕು ಸಾಧ್ಯತೆ ಅಲ್ಪ: ಅಧ್ಯಯನ

ಬ್ರಿಟನ್‌ನಲ್ಲಿ ನಡೆಸಿದ ನೂತನ ಅಧ್ಯಯನ ವರದಿಯಲ್ಲಿ ಉಲ್ಲೇಖ

ಪಿಟಿಐ
Published 5 ಜೂನ್ 2021, 1:40 IST
Last Updated 5 ಜೂನ್ 2021, 1:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಒಂದು ಬಾರಿ ಕೋವಿಡ್‌ ತಗಲಿದವರು ಮತ್ತೆ ಸೋಂಕಿಗೆ ಒಳಗಾಗುವ ಸಾಧ್ಯತೆ ಕಡಿಮೆ ಎಂದು ನೂತನ ಅಧ್ಯಯನ ವರದಿಯೊಂದು ಹೇಳಿದೆ. ಈ ಸೋಂಕಿಗೆ ಒಳಗಾಗಿದ್ದವರಿಗೆ, ನಂತರದ 10 ತಿಂಗಳವರೆಗೆ ಸೋಂಕು ತಗಲುವ ಸಾಧ್ಯತೆ ಇಳಿಕೆಯಾಗಿರುತ್ತದೆ ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.

ಬ್ರಿಟನ್‌ನ ವೃದ್ಧಾಶ್ರಮದಲ್ಲಿನ ನಿವಾಸಿಗಳು ಮತ್ತು ಸಿಬ್ಬಂದಿಯನ್ನು ಸತತ 4 ತಿಂಗಳ ಕಾಲ ಪರಿಶೀಲನೆಗೆ ಒಳಪಡಿಸಿ ಈ ಅಧ್ಯಯನ ವರದಿಯನ್ನು ಸಿದ್ಧಪಡಿಸಲಾಗಿದೆ. ಒಟ್ಟು 2,000 ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಲಾನ್ಸೆಟ್ ಹೆಲ್ದಿ ಲಾಂಗಿವಿಟಿ ನಿಯತಕಾಲಿಕದಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.

2,000 ಜನರಲ್ಲಿ 10 ತಿಂಗಳ ಹಿಂದೆ ಕೋವಿಡ್‌ಗೆ ತುತ್ತಾಗಿದ್ದವರು ಮತ್ತು ಕೋವಿಡ್‌ ತಗುಲದೇ ಇದ್ದವರನ್ನು ಹೋಲಿಕೆ ಮಾಡಿ ಅಧ್ಯಯನ ನಡೆಸಲಾಗಿದೆ. ಈ ಹಿಂದೆ ಸೋಂಕಿಗೆ ಒಳಗಾದ ವೃದ್ಧಾಶ್ರಮ ನಿವಾಸಿಗಳಲ್ಲಿ, ಮತ್ತೆ ಸೋಂಕಿಗೆ ಒಳಗಾಗುವ ಸಾಧ್ಯತೆ ಪ್ರಮಾಣ ಶೇ 85ರಷ್ಟು ಕಡಿಮೆ ಎಂಬುದು ಪತ್ತೆಯಾಗಿದೆ. ಇದೇ ರೀತಿ ಸೋಂಕಿಗೆ ಒಳಗಾದ ವೃದ್ಧಾಶ್ರಮ ಸಿಬ್ಬಂದಿಗಳಲ್ಲಿ, ಮತ್ತೆ ಸೋಂಕಿಗೆ ಒಳಗಾಗುವ ಸಾಧ್ಯತೆ ಪ್ರಮಾಣ ಶೇ 60ರಷ್ಟು ಕಡಿಮೆ ಎಂಬುದು ಪತ್ತೆಯಾಗಿದೆ.ಎರಡೂ ವರ್ಗದ ಜನರಲ್ಲಿ ಸೋಂಕಿಗೆ ಒಳಗಾಗುವ ಸಾಧ್ಯತೆಯಲ್ಲಿ ಭಾರಿ ವ್ಯತ್ಯಾಸವಿದ್ದರೂ, ಸೋಂಕಿನ ವಿರುದ್ಧ ಪ್ರಬಲ ಪ್ರತಿಕಾಯ ಅವರ ದೇಹದಲ್ಲಿ ಅಭಿವೃದ್ಧಿಯಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ADVERTISEMENT

ಈ ಅಧ್ಯಯನಕ್ಕೆ ಒಳಪಡಿಸಿದವರನ್ನು 2020ರ ಅಕ್ಟೋಬರ್‌ನಿಂದ 2021ರ ಫೆಬ್ರುವರಿ ಮಧ್ಯೆ ಪ್ರತಿ ವಾರವೂ ಪ್ರತಿಕಾಯ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಅವರಲ್ಲಿ ಪ್ರತಿಕಾಯ ಇರುವುದನ್ನು ದೃಢಪಡಿಸಿಕೊಳ್ಳಲಾಗಿತ್ತು. ಜತೆಗೆ ಅಗತ್ಯವಿದ್ದಾಗ ಆರ್‌ಟಿ-ಪಿಸಿಆರ್‌ ಪರೀಕ್ಷೆಯನ್ನೂ ಮಾಡಲಾಗುತ್ತಿತ್ತು. ಹೀಗೆ ಮಾಡಿದ್ದರಿಂದ ಅವರಲ್ಲಿ ಪ್ರತಿಕಾಯ ಇದೆಯೇ ಎಂಬುದನ್ನೂ ಪತ್ತೆಹಚ್ಚಲು ಸಾಧ್ಯವಾಗುತ್ತಿತ್ತು ಮತ್ತು ಅವರಿಗೆ ಮತ್ತೆ ಸೋಂಕು ತಗುಲಿದೆಯೇ ಎಂಬುದನ್ನೂ ಪತ್ತೆಹಚ್ಚಲು ಸಾಧ್ಯವಾಗುತ್ತಿತ್ತು ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.

ಈ ಅಧ್ಯಯನಕ್ಕೆ ಒಳಪಟ್ಟವರಲ್ಲಿ 634 ಮಂದಿ, ಈ ಹಿಂದೆ ಕೋವಿಡ್‌ಗೆ ಒಳಗಾಗಿದ್ದರು ಎಂಬುದು ಅವರ ಪ್ರತಿಕಾಯ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು. ಇವರಲ್ಲಿ ವೃದ್ಧಾಶ್ರಮದ ನಾಲ್ವರು ನಿವಾಸಿಗಳಿಗೆ ಮತ್ತು 10 ಸಿಬ್ಬಂದಿಗೆ ಮಾತ್ರವೇ ಮತ್ತೆ ಕೋವಿಡ್‌ ತಗುಲಿತು. 1,477 ಮಂದಿ ಈ ಹಿಂದೆ ಕೋವಿಡ್‌ಗೆ ಒಳಗಾಗಿಲ್ಲ ಎಂಬುದು ಅವರ ಪ್ರತಿಕಾಯ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು. ಇವರಲ್ಲಿ ವೃದ್ಧಾಶ್ರಮದ 93 ನಿವಾಸಿಗಳಿಗೆ ಮತ್ತು 111 ಸಿಬ್ಬಂದಿಗೆ ಕೋವಿಡ್ ಮತ್ತೆ ತಗುಲಿತ್ತು ಎಂದು ಅಧ್ಯಯನ ವರದಿಯ ದತ್ತಾಂಶಗಳು ಹೇಳುತ್ತವೆ.

ಕೋವಿಡ್‌ ತಗಲಿದವರಲ್ಲಿ ಸಹಜವಾಗಿಯೇ ಪ್ರತಿಕಾಯ ವಿಕಾಸವಾಗಿರುತ್ತದೆ. ಈ ಅಂಶವನ್ನು ಆಧಾರವಾಗಿ ಇರಿಸಿಕೊಂಡು, ಕೋವಿಡ್‌ ಲಸಿಕೆ ಕಾರ್ಯಕ್ರಮಗಳನ್ನು ಯೋಜಿಸಬಹುದು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.