ADVERTISEMENT

ಸಿನಿಮಾ, ಧಾರಾವಾಹಿ ಚಿತ್ರೀಕರಣಕ್ಕೆ ಮಾರ್ಗಸೂಚಿ ಬಿಡುಗಡೆ

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ನಿಯಮಾವಳಿ

ಪಿಟಿಐ
Published 23 ಆಗಸ್ಟ್ 2020, 19:40 IST
Last Updated 23 ಆಗಸ್ಟ್ 2020, 19:40 IST
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್   

ನವದೆಹಲಿ:ಸಿನಿಮಾ ಮತ್ತು ಟಿ.ವಿ ಧಾರಾವಾಹಿಗಳ ಚಿತ್ರೀಕರಣ ಆರಂಭಿಸಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅವಕಾಶ ನೀಡಿದ್ದು, ಚಿತ್ರೀಕರಣದ ವೇಳೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ‘ಆರೋಗ್ಯ ಸಚಿವಾಲಯ ಮತ್ತು ಗೃಹ ಸಚಿವಾಲಯದ ಜತೆ ಸಮಾಲೋಚನೆ ನಡೆಸಿ ಈ ನಿಯಮಾವಳಿಗಳನ್ನು ರೂಪಿಸಲಾಗಿದೆ. ಲಾಕ್‌ಡೌನ್‌ನಿಂದ ಚಿತ್ರೋದ್ಯಮ ಸ್ಥಗಿತವಾಗಿದೆ.ಇದರಿಂದ ಹಲವರು ಕೆಲಸ ಕಳೆದುಕೊಂಡಿದ್ದಾರೆ. ಚಿತ್ರೀಕರಣ ಮತ್ತೆ ಆರಂಭವಾಗುವುದರಿಂದ ಹಲವರಿಗೆ ಕೆಲಸ ದೊರೆಯುತ್ತದೆ’ ಎಂದು ಜಾವಡೇಕರ್ ಹೇಳಿದ್ದಾರೆ.

ಮಾರ್ಗಸೂಚಿಯಲ್ಲಿರುವ ನಿಯಮಾವಳಿಗಳು

ADVERTISEMENT

* ಚಿತ್ರೀಕರಣದ ಸ್ಥಳಕ್ಕೆ ಪ್ರವೇಶ ದ್ವಾರ ಮತ್ತು ನಿರ್ಗಮನ ದ್ವಾರ ಇರಬೇಕು. ಸೂಚಿತ ಮಾರ್ಗಗಳನ್ನೇ ಬಳಸುವಂತೆ ಎಚ್ಚರ ವಹಿಸಬೇಕು

* ಚಿತ್ರೀಕರಣದ ಸ್ಥಳವನ್ನು ಪ್ರವೇಶಿಸುವ ಮುನ್ನ ಕೈಗಳನ್ನು ಸ್ಯಾನಿಟೈಸ್ ಮಾಡುವುದು ಕಡ್ಡಾಯ. ಇದಕ್ಕೆ ವ್ಯವಸ್ಥೆ ಮಾಡಬೇಕು

* ಚಿತ್ರೀಕರಣದ ಸ್ಥಳ ಪ್ರವೇಶಿಸುವ ಮುನ್ನ ಥರ್ಮಲ್‌ ಸ್ಕ್ರೀನಿಂಗ್ ಕಡ್ಡಾಯ. ಕೋವಿಡ್‌ನ ಲಕ್ಷಣಗಳು ಇಲ್ಲದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಬೇಕು

* ಚಿತ್ರೀಕರಣದ ಸ್ಥಳದಲ್ಲಿ ಸೋಪಿನಿಂದ ಕೈತೊಳೆಯಲು ವ್ಯವಸ್ಥೆ ಮಾಡಿರಬೇಕು. ಎಲ್ಲಾ ಸಿಬ್ಬಂದಿ ಆಗಾಗ ಕೈತೊಳೆಯಬೇಕು. 40–60 ಸೆಕೆಂಡ್‌ನಷ್ಟು ಕಾಲ ಕೈತೊಳೆಯಬೇಕು

* ಚಿತ್ರೀಕರಣದಲ್ಲಿ ಭಾಗವಹಿಸುವ ಎಲ್ಲಾ ಸಿಬ್ಬಂದಿ ಕಡ್ಡಾಯವಾಗಿ ಮುಖಗವಸು ಹಾಕಿರಬೇಕು. ನಟರು ಕ್ಯಾಮೆರಾ ಮುಂದೆ ನಟಿಸುವಾಗ ಮಾತ್ರ ಮಾಸ್ಕ್ ಧರಿಸದೇ ಇರಲು ಅವಕಾಶವಿದೆ

* ವೃದ್ಧ ಸಿಬ್ಬಂದಿ, ಗರ್ಭಿಣಿ ಸಿಬ್ಬಂದಿ, ಕಾಯಿಲೆ ಇರುವವರು ಚಿತ್ರೀಕರಣದಲ್ಲಿ ಇದ್ದರೂ, ಅವರು ಸಾರ್ವಜನಿಕರ ಸಂಪರ್ಕಕ್ಕೆ ಬರದಂತೆ ಎಚ್ಚರವಹಿಸಬೇಕು

* ಚಿತ್ರೀಕರಣದ ಸ್ಥಳದಲ್ಲಿ ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳಬೇಕು. ಸಿಬ್ಬಂದಿ ಎಲ್ಲಿ ನಿಂತುಕೊಳ್ಳಬೇಕು ಎಂಬುದನ್ನು ಗುರುತು ಮಾಡಿರಬೇಕು. ಊಟದ ಸ್ಥಳದಲ್ಲಿ ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳಬೇಕು

* ಚಿತ್ರೀಕರಣದ ಸ್ಥಳದಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ

* ಚಿತ್ರೀಕರಣದಲ್ಲಿ ಭಾಗವಹಿಸುವ ಎಲ್ಲರೂ ಆರೋಗ್ಯ ಸೇತು ಆ್ಯಪ್‌ ಬಳಸುವಂತೆ ಶಿಫಾರಸು ಮಾಡಬೇಕು

* ಚಿತ್ರೀಕರಣದ ವೇಳೆ ಕೋವಿಡ್‌ ಲಕ್ಷಣ ಕಂಡುಬಂದರೆ, ಅಂತಹವರನ್ನು ಪ್ರತ್ಯೇಕವಾಗಿ ಇರಿಸಲು ತಾತ್ಕಾಲಿಕ ಐಸೊಲೇಷನ್‌ ವ್ಯವಸ್ಥೆ ಇರಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.