ADVERTISEMENT

ಕೋವಿಡ್‌- 19: ಕೇರಳದಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಿ ಸುಗ್ರೀವಾಜ್ಞೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 10:09 IST
Last Updated 5 ಜುಲೈ 2020, 10:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತಿರುವನಂತಪುರ: ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣಕ್ಕೆ ಕೇರಳ ಸರ್ಕಾರವು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಮಾಸ್ಕ್‌ ಧರಿಸುವುದು ಹಾಗೂ ಹೊರರಾಜ್ಯಗಳಿಂದ ಕೇರಳಕ್ಕೆ ಬರುವವರು ಹೆಸರು ನೋಂದಾಯಿಸುವುದನ್ನು ಕಡ್ಡಾಯಗೊಳಿಸಿ ಸುಗ್ರೀವಾಜ್ಞೆ ಹೊರಡಿಸಿದೆ. ಈ ನಿಯಮಗಳನ್ನು ಮೀರಿದವರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಇರುತ್ತದೆ.

ಕಳೆದ ಕೆಲವು ದಿನಗಳಿಂದ ಸ್ಥಳೀಯವಾಗಿ ಸೋಂಕು ಹರಡುವಿಕೆಯ ಪ್ರಮಾಣ ಹೆಚ್ಚಾಗಿದೆ. ಹಲವರ ಸೋಂಕಿನ ಮೂಲವನ್ನು ಪತ್ತೆ ಮಾಡುವುದು ಕಷ್ಟವಾಗುತ್ತಿದೆ. ಭಾರತೀಯ ವೈದ್ಯಕೀಯ ಸಂಸ್ಥೆಯೂ ಸೇರಿದಂತೆ ಕೆಲವು ತಜ್ಞರು, ರಾಜ್ಯದಲ್ಲಿ ಕೋವಿಡ್‌ ಸಮುದಾಯಕ್ಕೆ ಹಬ್ಬುವ ಅಪಾಯವಿದೆ ಎಂಬ ಎಚ್ಚರಿಕೆ ನೀಡಿದ್ದಾರೆ. ಈ ಕಾರಣಕ್ಕೆ ಸರ್ಕಾರವು ಅಂತರ ಕಾಯ್ದುಕೊಳ್ಳುವ ಕಟ್ಟುನಿಟ್ಟಿನ ಕ್ರಮ ಜಾರಿಗೆ ಮುಂದಾಗಿದೆ.

ಹೊಸ ತಿದ್ದುಪಡಿಯ ಪ್ರಕಾರ, ರಾಜ್ಯದ ಪ್ರತಿ ನಾಗರಿಕ ತಮ್ಮ ಕೆಲಸದ ಸ್ಥಳ ಅಥವಾ ಸಾರ್ವಜನಿಕ ಸ್ಥಳ ಮತ್ತು ವಾಹನಗಳಲ್ಲಿ ಕಡ್ಡಾಯವಾಗಿ ಮೂಗು ಹಾಗೂ ಬಾಯಿಯನ್ನು ಮುಚ್ಚಿಕೊಳ್ಳುವಂತೆ ಮಾಸ್ಕ್‌ ಧರಿಸಬೇಕು. ಆರು ಅಡಿಗಳ ಅಂತರವನ್ನು ಪ್ರತಿಯೊಬ್ಬರೂ ಕಾಪಾಡಿಕೊಳ್ಳಬೇಕು, ಹೊರರಾಜ್ಯ ಅಥವಾ ಹೊರದೇಶಗಳಿಂದ ಕೇರಳಕ್ಕೆ ಬರುವ ಪ್ರತಿಯೊಬ್ಬರೂ ವೆಬ್‌ ಆಧರಿತ ‘ಕೋವಿಡ್‌–19 ಜಾಗೃತ ಇ–ವೇದಿಕೆ’ಯಲ್ಲಿ ತಮ್ಮ ವಿವರಗಳನ್ನು ತುಂಬಬೇಕು ಮತ್ತು ಪ್ರತ್ಯೇಕ ವಾಸವನ್ನು ಅನುಭವಿಸಬೇಕು.

ADVERTISEMENT

ಸಂಬಂಧಪಟ್ಟ ಸಂಸ್ಥೆಗಳಿಂದ ಲಿಖಿತ ಒಪ್ಪಿಗೆ ಪಡೆಯದೆ ಪ್ರತಿಭಟನೆ, ಧರಣಿಗಳನ್ನು ನಡೆಸುವಂತಿಲ್ಲ. ಇಂಥ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯು 10ನ್ನು ಮೀರುವಂತಿಲ್ಲ. ಮದುವೆ ಸಮಾರಂಭದಲ್ಲಿ 50ಕ್ಕೂ ಹೆಚ್ಚು ಜನರು ಸೇರುವಂತಿಲ್ಲ. ಅಂತ್ಯ ಸಂಸ್ಕಾರದಲ್ಲಿ ಏಕ ಕಾಲದಲ್ಲಿ ಗರಿಷ್ಠ 20ಮಂದಿ ಮಾತ್ರ ಪಾಲ್ಗೊಳ್ಳಬಹುದು ಎಂದು ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.