ADVERTISEMENT

ಉತ್ತರ ಪ್ರದೇಶ: ನವಜಾತ ಹೆಣ್ಣು ಶಿಶುವಿಗೆ ‘ಕೊರೊನಾ’ ಹೆಸರಿಟ್ಟರು!

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 9:49 IST
Last Updated 23 ಮಾರ್ಚ್ 2020, 9:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು (ಕೋವಿಡ್–19) ಜನರನ್ನು ವ್ಯಾಪಕವಾಗಿ ಬಲಿತೆಗೆದುಕೊಳ್ಳುತ್ತಿರುವ ಮಧ್ಯೆಯೇ, ಉತ್ತರ ಪ್ರದೇಶದಲ್ಲಿ ನವಜಾನ ಹೆಣ್ಣು ಶಿಶುವೊಂದಕ್ಕೆ ‘ಕೊರೊನಾ’ ಎಂದು ಹೆಸರಿಡಲಾಗಿದೆ.

ಭಾನುವಾರ ಜನತಾ ಕರ್ಫ್ಯೂ ಜಾರಿಗೆ ಬರುವ ಕೆಲವೇ ತಾಸು ಮುನ್ನ ಗೋರಖಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ಕೊರೊನಾ ಎಂದು ನಾಮಕರಣ ಮಾಡಲಾಗಿದೆ.

‘ಕೊರೊನಾ’ ಹೆಸರಿಟ್ಟಿರುವುದನ್ನು ಶಿಶುವಿನ ಚಿಕ್ಕಪ್ಪ, ಗೋರಖಪುರದ ಸೋಹ್‌ಗೌರಾ ನಿವಾಸಿ ನಿತೇಶ್ ತ್ರಿಪಾಠಿ ಸಮರ್ಥಿಸಿಕೊಂಡಿದ್ದಾರೆ. ಕೊರೊನಾ ವೈರಸ್ ಸಮಾಜವನ್ನು ಒಗ್ಗೂಡಿಸಿದೆ ಮತ್ತು ವೈರಸ್ ವಿರುದ್ಧ ಸಂಘಟಿತ ಹೋರಾಟ ಮಾಡುವ ನಿಟ್ಟಿನಲ್ಲಿ ಪ್ರೇರೇಪಣೆ ನೀಡಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

‘ಆ ವೈರಸ್ ಅಪಾಯಕಾರಿ ಎಂಬುದರಲ್ಲಿ ಅನುಮಾನವಿಲ್ಲ. ಅದು ವಿಶ್ವದಾದ್ಯಂತ ಅನೇಕ ಜನರನ್ನು ಕೊಂದುಹಾಕಿದೆ. ಆದರೂ ನಮ್ಮಲ್ಲಿ ಅನೇಕ ಉತ್ತಮ ಹವ್ಯಾಸಗಳನ್ನೂ ಬೆಳೆಸಿದೆ’ ಎಂದು ಅವರು ಹೇಳಿದ್ದಾರೆ.

ಶಿಶುವಿನ ತಾಯಿ, ತಂದೆ, ಕುಟುಂಬದವರ ಒಪ್ಪಿಗೆಯ ಮೇರೆಗೆ ಆ ಹೆಸರು ಇಡಲಾಗಿದೆ. ಜನರು ಕೊರೊನಾ ವೈರಸ್ ಬಗ್ಗೆ ಭೀತರಾಗದೆ ಸರ್ಕಾರ ನೀಡುವ ಸಲಹೆ–ಸೂಚನೆಗಳನ್ನು ಪಾಲಿಸಬೇಕು ಎಂದೂ ಅವರು ಹೇಳಿದ್ದಾರೆ.

‘ಈ ಮಗುವು ಕೊರೊನಾ ವೈರಸ್ ವಿರುದ್ಧ ಜನತೆಯ ಸಂಘಟಿತ ಹೋರಾಟದ ಸಂಕೇತವಾಗಿರಲಿದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.