ADVERTISEMENT

ಆರೋಗ್ಯ ಕಾರ್ಯಕರ್ತರ ಸುರಕ್ಷತೆ ವಿಚಾರದಲ್ಲಿ ರಾಜಿ ಇಲ್ಲ: ಪ್ರಧಾನಿ ಮೋದಿ

ಪಿಟಿಐ
Published 22 ಏಪ್ರಿಲ್ 2020, 14:46 IST
Last Updated 22 ಏಪ್ರಿಲ್ 2020, 14:46 IST
ನರೇಂದ್ರ ಮೋದಿ (ಸಂಗ್ರಹ ಚಿತ್ರ)
ನರೇಂದ್ರ ಮೋದಿ (ಸಂಗ್ರಹ ಚಿತ್ರ)   

ನವದೆಹಲಿ: ಕೊರೊನಾ (ಕೋವಿಡ್–19) ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರ ಸುರಕ್ಷತೆ ವಿಚಾರದಲ್ಲಿ ರಾಜಿ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ವಿಚಾರದಲ್ಲಿ ಸರ್ಕಾರದ ಬದ್ಧತೆಯನ್ನು ಇಂದು ರೂಪಿಸಲಾಗಿರುವ ಸುಗ್ರೀವಾಜ್ಞೆ ತೋರಿಸಿಕೊಟ್ಟಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವ, ದೌರ್ಜನ್ಯ ಎಸಗುವ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸುವವರಿಗೆ ಕಠಿಣ ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಇಂದು (ಏಪ್ರಿಲ್ 22) ಅನುಮೋದನೆ ನೀಡಿದೆ. ಈ ಕುರಿತು ಉಲ್ಲೇಖಿಸಿರುವ ಪ್ರಧಾನಿ, ಸುಗ್ರೀವಾಜ್ಞೆಯು ಆರೋಗ್ಯ ಕಾರ್ಯಕರ್ತರ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ ಎಂದು ಹೇಳಿದ್ದಾರೆ.

1987ರ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ರೂಪಿಸಿರುವ ಕೇಂದ್ರವು, ಆರೋಗ್ಯ ಕಾರ್ಯಕರ್ತರು ಮತ್ತು ಕೊರೊನಾ ವಿರುದ್ಧ ಹೋರಾಡುತ್ತಿರುವ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವವರಿಗೆ 6 ತಿಂಗಳುಗಳಿಂದ 7 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಒದಗಿಸಿದೆ. ಜತೆಗೆ, ತಪ್ಪಿತಸ್ಥರಿಗೆ ₹ 1 ಲಕ್ಷದಿಂದ ₹ 5 ಲಕ್ಷದ ವರೆಗೆ ದಂಡ ವಿಧಿಸಲು, ಜಾಮೀನು ನೀಡದೇ ಇರಲೂ ಅನುವು ಮಾಡಿಕೊಟ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.