ADVERTISEMENT

ಸಿಎಎ ಅಲ್ಲ, ಕೊರೊನಾವೈರಸ್ ನಿಯಂತ್ರಣದತ್ತ ಗಮನ ಹರಿಸಿ: ಕೇಂದ್ರಕ್ಕೆ ನಿತೀಶ್ ಸಲಹೆ

ಐಎಎನ್ಎಸ್
Published 6 ಮೇ 2022, 16:28 IST
Last Updated 6 ಮೇ 2022, 16:28 IST
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌   

ಪಟ್ನಾ: ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸುವುದರ ಬದಲು ಕೊರೊನಾವೈರಸ್‌ ನಿಯಂತ್ರಣದತ್ತ ಗಮನ ಹರಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಹೇಳಿದ್ದಾರೆ.

ಕೋವಿಡ್‌–19 ನಾಲ್ಕನೇ ಅಲೆ ಮುಕ್ತಾಯದ ಬಳಿಕ ಕೇಂದ್ರ ಸರ್ಕಾರವು ದೇಶದಲ್ಲಿ ಸಿಎಎ ಜಾರಿಗೊಳಿಸಲಿದೆ ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಿತೀಶ್ ಕುಮಾರ್‌, ಕೊರೊನಾವೈರಸ್‌ ಪ್ರಕರಣಗಳು ಹೆಚ್ಚುತ್ತಿರುವ ಹೊತ್ತಿನಲ್ಲಿ, ಅವರು (ಅಮಿತ್‌ ಶಾ) ಸೋಂಕು ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

'ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿವೆ. ಇದು ನಮ್ಮ ಮುಂದಿರುವ ದೊಡ್ಡ ಸವಾಲು. ಅವರು (ಅಮಿತ್ ಶಾ) ಸೋಂಕು ನಿಯಂತ್ರಿಸುವುದರತ್ತ ನೋಡಬೇಕು. ನಮಗಾಗಿ ಜಾರಿಯಾಗುವ ಯಾವುದೇ ಯೋಜನೆಯ ಬಗ್ಗೆ ನಾವು ಚಿಂತನೆ ನಡೆಸುತ್ತೇವೆ' ಎಂದು ಹೇಳಿದ್ದಾರೆ.

ADVERTISEMENT

ನಿತೀಶ್‌ ಕುಮಾರ್ ಅವರ ಜೆಡಿಯು ಪಕ್ಷವು ಬಿಜೆಪಿ ಬೆಂಬಲದೊಂದಿಗೆ ಬಿಹಾರದಲ್ಲಿ ಸರ್ಕಾರ ರಚಿಸಿದೆ. ಆದರೆ,ಕೇಂದ್ರ ಬಿಜೆಪಿ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಸಿಎಎ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ಏಕರೂಪ ನಾಗರಿಕ ಸಂಹಿತೆ ವಿಚಾರದಲ್ಲಿ ನಿತೀಶ್‌ ಒಮ್ಮತದ ನಿಲುವು ಹೊಂದಿಲ್ಲ.

ಒಂದುವೇಳೆ ಈ ವಿಚಾರದಲ್ಲಿ ನಿತೀಶ್‌ ಅವರು ಕೇಂದ್ರಕ್ಕೆ ಬೆಂಬಲ ನೀಡಿದರೆ, ಜೆಡಿಯು ಪಕ್ಷವು ಬಿಹಾರದಲ್ಲಿ ಮುಂಬರುವ ಚುನಾವಣೆಗಳ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮತಗಳನ್ನು ಕಳೆದುಕೊಳ್ಳುವ ಆತಂಕ ಎದುರಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.