ADVERTISEMENT

ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವು: 3 ರಾಜ್ಯಗಳಿಗೆ ಎನ್‌ಎಚ್‌ಆರ್‌ಸಿ ನೋಟಿಸ್‌

ಪಿಟಿಐ
Published 6 ಅಕ್ಟೋಬರ್ 2025, 17:39 IST
Last Updated 6 ಅಕ್ಟೋಬರ್ 2025, 17:39 IST
   

ನವದೆಹಲಿ: ಕೆಮ್ಮಿನ ಸಿರಪ್‌ ಸೇವನೆಯಿಂದ ಮಕ್ಕಳು ಮೃತಪಟ್ಟಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗವು (ಎನ್‌ಎಚ್ಆರ್‌ಸಿ) ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ನೋಟಿಸ್‌ ನೀಡಿದೆ.

ಮಕ್ಕಳ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಮತ್ತು ಕಲಬೆರಕೆ ಔಷಧಗಳ ಮಾರಾಟವನ್ನು ತಕ್ಷಣದಿಂದಲೇ ನಿಷೇಧಿಸುವಂತೆ ನಿರ್ದೇಶಿಸಿದೆ.

ಕಲಬೆರಕೆ ಔಷಧಗಳ ಪೂರೈಕೆ ಬಗ್ಗೆಯೂ ತನಿಖೆ ನಡೆಸಲು ಆದೇಶಿಸುವಂತೆ ಹಾಗೂ ಅಂತಹ ಔಷಧಗಳ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷಾ ವರದಿ ನೀಡಲು ಎಲ್ಲ ಪ್ರಾದೇಶಿಕ ಪ್ರಯೋಗಾಲಯಗಳಿಗೆ ಸೂಚನೆ ನೀಡಲು, ಭಾರತೀಯ ಔಷಧ ನಿಯಂತ್ರಣ ವಿಭಾಗ, ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ,ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ ಮತ್ತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಎನ್‌ಎಚ್‌ಆರ್‌ಸಿ ಆದೇಶಿಸಿದೆ.

ADVERTISEMENT

ಕಲಬೆರಕೆ ಔಷಧಿಗಳನ್ನು ನಿಷೇಧಿಸಿರುವ ಕುರಿತು ವರದಿ ನೀಡಲು ಮೂರು ರಾಜ್ಯಗಳ ಮುಖ್ಯ ಔಷಧ ನಿಯಂತ್ರಕರಿಗೆ ಆದೇಶ ನೀಡುವಂತೆಯೂ ಸೂಚಿಸಿದೆ.

ಔಷಧ ನಿಯಂತ್ರಕರ ವರ್ಗಾವಣೆ (ಛಿಂದ್ವಾಢ ವರದಿ): ಕೆಮ್ಮಿನ ಸಿರಪ್‌ ಸೇವನೆ ಬಳಿಕ ಮೂತ್ರಪಿಂಡ ವೈಫಲ್ಯದಿಂದ 14 ಮಕ್ಕಳು ಮೃತಪಟ್ಟ ಪ್ರಕರಣದ ತನಿಖೆ ನಡೆದಿರುವಾಗಲೇ, ರಾಜ್ಯದ ಔಷಧ ನಿಯಂತ್ರಕರಾದ ದಿನೇಶ್‌ ಮೌರ್ಯ ಅವರನ್ನು ಮಧ್ಯಪ್ರದೇಶ ಸರ್ಕಾರ ವರ್ಗಾಯಿಸಿದೆ.

ಛಿಂದ್ವಾಢದಲ್ಲಿ ಡ್ರಗ್‌ ಇನ್ಸ್‌ಪೆಕ್ಟರ್‌ ಆಗಿದ್ದ ಗೌರವ್ ಶರ್ಮಾ, ಜಬಲ್‌ಪುರದಲ್ಲಿ ಡ್ರಗ್‌ ಇನ್ಸ್‌ಪೆಕ್ಟರ್‌ ಆಗಿದ್ದ ಶರದ್‌ ಕುಮಾರ್ ಜೈನ್ ಹಾಗೂ ಆಹಾರ ಮತ್ತು ಔಷಧ ಆಡಳಿತದ ಉಪ ನಿರ್ದೇಶಕ ಶೋಭಿತ್ ಕೋಸ್ಟಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಸ್‌ಐಟಿ ರಚನೆ: ಪ್ರಕರಣದ ತನಿಖೆಗಾಗಿ ಮಧ್ಯಪ್ರದೇಶ ಪೊಲೀಸರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.