ADVERTISEMENT

ಅನ್‌ಲಾಕ್ 2.0: ಇನ್ನಷ್ಟು ಎಚ್ಚರಕ್ಕೆ ಪ್ರಧಾನಿ ಕರೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 15:09 IST
Last Updated 28 ಜೂನ್ 2020, 15:09 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ದೇಶವು ‘ಲಾಕ್‌ಡೌನ್’ ಹಂತದಿಂದ ಸಂಪೂರ್ಣ ‘ಅನ್‌ಲಾಕ್’ ಹಂತದತ್ತ ಸಾಗುತ್ತಿದ್ದು, ಸೋಂಕಿನ ವಿರುದ್ಧ ಜನರು ವೈಯಕ್ತಿಕವಾಗಿ ಜಾಗೃತರಾಗಿ ಇರಬೇಕು ಎಂದು ಪ್ರಧಾನಿ ಕರೆ ಕೊಟ್ಟಿದ್ದಾರೆ. ಅನ್‌ಲಾಕ್ 1.0 ಕೊನೆಗೊಳ್ಳಲು ಮೂರು ದಿನ ಬಾಕಿ ಇರುವಾಗಲೇ, ಕೆಲವು ರಾಜ್ಯಗಳು ವಿವಿಧ ಸ್ವರೂಪದಲ್ಲಿ ಲಾಕ್‌ಡೌನ್ ಜಾರಿಗೊಳಿಸಿವೆ.

‘ಈ ಅನ್‌ಲಾಕ್ ಸಮಯದಲ್ಲಿ ಜನರು ಎರಡು ಮುಖ್ಯವಾದ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಕೊರೊನಾ ಎದುರಿಸುವುದು ಹಾಗೂ ಆರ್ಥಿಕತೆಗೆ ಬಲ ತುಂಬುವುದು ಬಹಳ ಮುಖ್ಯ. ಲಾಕ್‌ಡೌನ್‌ಗೆ ಹೋಲಿಸಿದರೆ ಅನ್‌ಲಾಕ್ ಸಮಯದಲ್ಲಿ ನಾವು ಹೆಚ್ಚು ಎಚ್ಚರಿಕೆಯಿಂದ ಇರಬೇಕಿದೆ. ನಿಮ್ಮ ಜಾಗೃತ ಮನಸ್ಥಿತಿಯೇ ಕೊರೊನಾದಿಂದ ನಿಮ್ಮನ್ನು ರಕ್ಷಿಸುತ್ತದೆ. ಮಾಸ್ಕ್ ಧರಿಸದೇ, ಅಂತರ ಕಾಪಾಡಿಕೊಳ್ಳದೇ ಇದ್ದರೆ ನೀವು ಅಪಾಯಕ್ಕೆ ಸಿಲುಕಿಕೊಳ್ಳುವ ಜತೆಗೆ ಇತರರನ್ನೂ ಅಪಾಯಕ್ಕೆ ನೂಕುತ್ತೀರಿ’ ಎಂದು ಅವರು ಎಚ್ಚರಿಸಿದ್ದಾರೆ.

ಮೇ 30ರಂದು 5ನೇ ಹಂತದ ಲಾಕ್‌ಡೌನ್ ಕೊನೆಗೊಂಡ ಬಳಿಕ ಅನ್‌ಲಾಕ್ 1.0 ಜಾರಿಯಾಗಿತ್ತು. ಜೂನ್ 17ರಂದು ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿದ್ದ ಪ್ರಧಾನಿ, ಜುಲೈ 1ರಿಂದ ಆರಂಭವಾಗಲಿರುವ ಅನ್‌ಲಾಕ್ 2.0ಗೆ ಬೆಂಬಲ ನೀಡುವಂತೆ ಸೂಚಿಸಿದ್ದರು.

ADVERTISEMENT

‘ಆರ್ಥಿಕ ಪುನಶ್ಚೇತನ ಕ್ರಮಗಳು ಜಾರಿಯಾಗಿವೆ. ಹಲವು ವರ್ಷಗಳಿಂದ ಗಣಿಗಾರಿಕೆಯು ಲಾಕ್‌ಡೌನ್‌ನಲ್ಲೇ ಇತ್ತು. ಅದರ ವಾಣಿಜ್ಯ ಹರಾಜಿಗೆ ಅನುಮೋದನೆ ನೀಡುವ ನಿರ್ಧಾರವು ಇಡೀ ಸನ್ನಿವೇಶವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಎನಿಸುವ ಸುಧಾರಣೆಗಳಿಗೆ ದಾರಿ ಮಾಡಿಕೊಟ್ಟಿದೆ. ಸ್ವಾವಲಂಬನೆ ಮಾತ್ರವಲ್ಲದೇ, ತಂತ್ರಜ್ಞಾನ ಸುಧಾರಣೆಗೂ ಅನ್‌ಲಾಕ್‌ ನೆರವಾಗಿದೆ’ ಎಂದು ಮೋದಿ ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.