ADVERTISEMENT

ರಾಹುಲ್ ಅನರ್ಹತೆ ವಿಚಾರವಾಗಿ ಕಲಾಪಕ್ಕೆ ಅಡ್ಡಿ; ಪ್ರತಿಪಕ್ಷಗಳ ವಿರುದ್ಧ ಶಾ ಕಿಡಿ

ಪಿಟಿಐ
Published 7 ಏಪ್ರಿಲ್ 2023, 11:32 IST
Last Updated 7 ಏಪ್ರಿಲ್ 2023, 11:32 IST
ಕೇಂದ್ರ ಗೃಹ ಸಚಿವ ಅಮಿತ್ ಶಾ (ಪಿಟಿಐ ಚಿತ್ರ)
ಕೇಂದ್ರ ಗೃಹ ಸಚಿವ ಅಮಿತ್ ಶಾ (ಪಿಟಿಐ ಚಿತ್ರ)   

ಕೌಶಂಬಿ (ಉತ್ತರ ಪ್ರದೇಶ): ರಾಹುಲ್‌ ಗಾಂಧಿಯವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿರುವ ವಿಚಾರವಾಗಿ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸಿದ ವಿರೋಧ ಪಕ್ಷಗಳನ್ನು ಜನರು ಕ್ಷಮಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶುಕ್ರವಾರ ಕಿಡಿಕಾರಿದ್ದಾರೆ.

ಕೌಶಂಬಿ ಮಹೋತ್ಸವಕ್ಕೆ ಚಾಲನೆ ನೀಡಿದ ಬಳಿಕ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ಸಮಾಜದ ಎಲ್ಲ ವರ್ಗಗಳಿಗೂ ಕಲ್ಯಾಣ ಯೋಜನೆಗಳನ್ನು ರೂಪಿಸಿರುವುದಕ್ಕಾಗಿ ಜನರು ನರೇಂದ್ರ ಮೋದಿ ಅವರನ್ನು 2024ರಲ್ಲಿ ಮತ್ತೊಮ್ಮೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ರಾಹುಲ್‌ ಗಾಂಧಿಯವರ ಅನರ್ಹತೆಯ ವಿಚಾರವಾಗಿ ಸಂಸತ್ ಕಲಾಪಕ್ಕೆ ಅಡ್ಡಿಪಡಿಸಿದ ವಿರೋಧ ಪಕ್ಷಗಳನ್ನು ದೇಶವು ಕ್ಷಮಿಸುವುದಿಲ್ಲ. ಪ್ರಜಾಪ್ರಭುತ್ವ ಅಪಾಯದಲ್ಲಿಲ್ಲ. ಜಾತಿವಾದ ಮತ್ತು ಕುಟುಂಬ ರಾಜಕಾರಣ ಅಪಾಯದಲ್ಲಿವೆ' ಎಂದು ತಿರುಗೇಟು ನೀಡಿದ್ದಾರೆ.

ADVERTISEMENT

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉಪಮುಖ್ಯಮಂತ್ರಿಗಳಾದ ಕೇಶವ್‌ ಪ್ರಸಾದ್ ಮೌರ್ಯ, ಬ್ರಜೇಶ್‌ ಪಾಠಕ್‌ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಭೂಪೇಂದ್ರ ಚೌಧರಿ ಅವರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಗುಜರಾತ್‌ನ ಸೂರತ್‌ ನ್ಯಾಯಾಲಯವು ಮಾನಹಾನಿ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ 24 ಗಂಟೆಯೊಳಗೆ, ಮಾರ್ಚ್‌ 24ರಂದು ರಾಹುಲ್‌ ಗಾಂಧಿಯವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು. ಇದನ್ನು ಖಂಡಿಸಿದ್ದ ವಿರೋಧ ಪಕ್ಷಗಳು, ಬಿಜೆಪಿಯು ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದವು.‌

ಪ್ರತಿಪಕ್ಷಗಳ ಒಗ್ಗಟ್ಟು ದರ್ಶನ
ಕೇಂದ್ರ ಬಜೆಟ್‌ ಅಧಿವೇಶನದ ಎರಡನೇ ಅವಧಿಯೂ ಚರ್ಚೆ ಇಲ್ಲದೆ ಮುಕ್ತಾಯಗೊಂಡಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಧೋರಣೆಯೇ ಕಾರಣ. ಇದು ಹೀಗೆ ಮುಂದುವರಿದರೆ ಪ್ರಜಾಪ್ರಭುತ್ವ ಕಗ್ಗೊಲೆಯಾಗಿ ದೇಶವು ಸರ್ವಾಧಿಕಾರಿ ಆಡಳಿತದತ್ತ ಹೊರಳಲಿದೆ ಎಂದು ಕಿಡಿ ಕಾರಿದ್ದ ಪ್ರತಿಪಕ್ಷಗಳು ಗುರುವಾರ ಒಗ್ಗಟ್ಟು ಪ್ರದರ್ಶಿಸಿದ್ದವು.

'ಬಿಜೆಪಿ ಆಡಳಿತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಎದುರಾಗಿದೆ' ಎಂದು ಆರೋಪಿಸಿದ ವಿವಿಧ ಪಕ್ಷಗಳ ಸಂಸದರು, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಂಸತ್‌ ಭವನದಿಂದ ವಿಜಯ ಚೌಕದವರೆಗೂ 'ತಿರಂಗಾ ನಡಿಗೆ' ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.