ADVERTISEMENT

ಪುತ್ರಿಯರನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿರುವ ಸ್ವಾಮಿ ನಿತ್ಯಾನಂದ: ದಂಪತಿ ದೂರು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 9:42 IST
Last Updated 19 ನವೆಂಬರ್ 2019, 9:42 IST
ನಿತ್ಯಾನಂದ ಸ್ವಾಮಿ
ನಿತ್ಯಾನಂದ ಸ್ವಾಮಿ   

ಅಹಮದಾಬಾದ್: ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಅವರು ನಡೆಸುತ್ತಿರುವ ಸಂಸ್ಥೆಯಲ್ಲಿ ಅಕ್ರಮವಾಗಿ ಬಂಧಿಸಲಾಗಿರುವ ತಮ್ಮಿಬ್ಬರು ಪುತ್ರಿಯರನ್ನು ವಶಕ್ಕೆ ನೀಡುವಂತೆದಂಪತಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಅರ್ಜಿದಾರರಾದ ಜನಾರ್ಧನ ಶರ್ಮಾ ಮತ್ತು ಅವರ ಪತ್ನಿ, ಸ್ವಾಮಿ ನಿತ್ಯಾನಂದ ಅವರು ಬೆಂಗಳೂರಿನಲ್ಲಿ ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗೆ 2013ರಲ್ಲಿ 7 ರಿಂದ 15 ವಯಸ್ಸಿನ ತಮ್ಮ ನಾಲ್ವರು ಪುತ್ರಿಯರನ್ನು ದಾಖಲಿಸಿದ್ದೆವು.

ಈ ವರ್ಷ ತಮ್ಮ ಪುತ್ರಿಯರನ್ನು ಬೆಂಗಳೂರಿನಿಂದ ಅಹಮದಾಬಾದ್‌ನ ದೆಹಲಿ ಪಬ್ಲಿಕ್ ಶಾಲೆಯ ಆವರಣದಲ್ಲಿರುವ ನಿತ್ಯಾನಂದ ಧ್ಯಾನಪೀಠಂನ ಅಂಗವಾದ ಯೋಗಿಣಿ ಸರ್ವಗ್ಯಪೀಠಂಗೆ ಕಳುಹಿಸಲಾಗಿದೆ ಎಂಬುದು ತಿಳಿದಿದೆ. ಆಗ ಅವರನ್ನು ಭೇಟಿಯಾಗಲು ಪ್ರಯತ್ನಿಸಿದ್ದೆವು. ಆದರೆ ಸಂಸ್ಥೆಯ ಅಧಿಕಾರಿಗಳು ನಮಗೆ ಪುತ್ರಿಯರನ್ನು ಭೇಟಿ ಮಾಡಲು ಅವಕಾಶ ನಿರಾಕರಿಸಿದರು ಎಂದು ದೂರಿದ್ದಾರೆ.

ADVERTISEMENT

ಪೊಲೀಸರ ಸಹಕಾರದೊಂದಿಗೆ ಸಂಸ್ಥೆಗೆ ಭೇಟಿ ನೀಡಿದ ಪಾಲಕರು ಇಬ್ಬರು ಅಪ್ರಾಪ್ತ ಪುತ್ರಿಯರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಹಿರಿಯ ಪುತ್ರಿಯರಾದ ಲೋಪಮುದ್ರ (21) ಮತ್ತು ನಂದಿತಾ(18) ಅವರೊಂದಿಗೆ ಬರಲು ನಿರಾಕರಿಸಿದರು.

ನಮ್ಮಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಅಪಹರಿಸಿ ಎರಡು ವಾರಗಳಿಗಿಂತಲೂ ಹೆಚ್ಚು ಕಾಲ ಅಕ್ರಮ ಬಂಧನದಲ್ಲಿರಿಸಲಾಗಿತ್ತು ಮತ್ತು ಅವರು ನಿದ್ರೆಯಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

'ಕಾನೂನುಬಾಹಿರ ಬಂಧನ'ದಲ್ಲಿ ಇರಿಸಲಾಗಿದೆ ಎಂದು ಆರೋಪಿಸಿರುವ ತಮ್ಮ ಹೆಣ್ಣುಮಕ್ಕಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ಮತ್ತು ಸಂಸ್ಥೆಯ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಬೇಕು. ಅವರ ಜವಾಬ್ದಾರಿಯನ್ನು ನ್ಯಾಯಾಲಯವೇ ಹೊರಬೇಕು ಎಂದು ಕೋರಿದ್ದಾರೆ.

ಇದಲ್ಲದೆ ಸಂಸ್ಥೆಯೊಳಗೆ ಇಟ್ಟುಕೊಂಡಿರುವ ಇತರೆ ಅಪ್ರಾಪ್ತ ಹೆಣ್ಣು ಮಕ್ಕಳ ಕುರಿತು ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.