ADVERTISEMENT

ರಸ್ತೆ ಅಪಘಾತಗಳಲ್ಲಿ ತೀರಾ ಕಡಿಮೆ ಪರಿಹಾರ ನೀಡಬೇಡಿ: ಸುಪ್ರೀಂ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 12:29 IST
Last Updated 19 ಸೆಪ್ಟೆಂಬರ್ 2020, 12:29 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ರಸ್ತೆ ಅಪಘಾತ‍ಪ್ರಕರಣಗಳಲ್ಲಿ ಪರಿಹಾರ ನ್ಯಾಯಾಲಯಗಳು ತೀರಾ ಕಡಿಮೆ ಪರಿಹಾರ ಘೋಷಿಸಬಾರದು. ಈ ಕುರಿತು ದೂರದೃಷ್ಟಿ ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್‌ ನ್ಯಾಯಾಲಯಗಳಿಗೆ ಸೂಚಿಸಿದೆ.

ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತರು ಅನುಭವಿಸಿದ ಮಾನಸಿಕ ಮತ್ತು ಭಾವಾನಾತ್ಮಕ ಗಾಯಗಳು ಆಳವಾಗಿರುತ್ತವೆ. ಜೊತೆಗೆ ಅಪಘಾತದಿಂದಾಗಿ ಆದ ದೈಹಿಕ ಅಸಾಮರ್ಥ್ಯವೂ ಅವರ ಜೀವನವನ್ನೇ ಕಸಿದುಕೊಂಡಿರುತ್ತದೆ. ಸಂಪೂರ್ಣ ಬದಲಾದ ಲೋಕದಲ್ಲಿ ಸಂತ್ರಸ್ತರುತಮ್ಮ ವೈಯಕ್ತಿಕ ಆಯ್ಕೆ ಕಳೆದುಕೊಂಡು ಬದುಕಬೇಕಾಗಿರುತ್ತದೆ. ಈ ಎಲ್ಲ ಅಂಶಗಳನ್ನು, ಪರಿಹಾರ ಕೋರಿ ಬಂದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಧೀಶರು ಗಮನಿಸಬೇಕು’ ಎಂದು ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರ ರಾವ್‌, ಕೃಷ್ಣ ಮುರಾರಿ ಹಾಗೂ ಎಸ್‌.ರವೀಂದ್ರ ಭಟ್‌ ಅವರಿದ್ದ ಪೀಠವು ಹೇಳಿತು.

‘ದೈಹಿಕವಾಗಿ ಯಾವುದೇ ತೊಂದರೆಯಿಲ್ಲದ ವ್ಯಕ್ತಿಯು ಅಪಘಾತದ ನಂತರ ಅಂಗವಿಕಲರಾದಾಗ, ಸಂಪೂರ್ಣವಾಗಿ ಕಂಗೆಡುತ್ತಾರೆ. ಇಂಥ ಸಂದರ್ಭದಲ್ಲಿ ನ್ಯಾಯಾಲಯಗಳುತೀರಾ ಕಡಿಮೆ ಪರಿಹಾರ ಘೋಷಿಸಿದರೆ ಅದು ಸಂತ್ರಸ್ತರಿಗೆ ಮಾಡಿದ ಅಪಮಾನ’ ಎಂದು ಪೀಠವು ಅಭಿಪ್ರಾಯಪಟ್ಟಿತು.

ADVERTISEMENT

₹19 ಲಕ್ಷ ಪರಿಹಾರ: ಟೈಪಿಸ್ಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಪ್ಪು ಯಾದವ್‌ ಎಂಬುವವರೊಬ್ಬರು 2012ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತಮ್ಮ ಬಲಗೈ ಕಳೆದುಕೊಂಡಿದ್ದರು. ಈ ಕುರಿತು ಗುರುವಾರ ವಿಚಾರಣೆ ಸಂದರ್ಭದಲ್ಲಿ ಪೀಠವು, ಪರಿಹಾರ ಮೊತ್ತವನ್ನು ₹7.77 ಲಕ್ಷದಿಂದ ₹19.65 ಲಕ್ಷಕ್ಕೆ ಏರಿಕೆ ಮಾಡಿ ತೀರ್ಪು ಪ್ರಕಟಿಸಿತು. ಟೈಪಿಸ್ಟ್‌ ಆಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಅವರ ಕೈಗಳೇ ಜೀವನಾಧಾರ. ಹೀಗಾಗಿ ಅವರ ಆದಾಯವನ್ನೇ ಅವರು ಕಳೆದುಕೊಂಡಿದ್ದಾರೆ ಎಂದು ಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.