ADVERTISEMENT

ಕೋವಿಡ್‌ ಸಾವುಗಳಿಗೆಲ್ಲ ವೈದ್ಯಕೀಯ ನಿರ್ಲಕ್ಷ್ಯವೊಂದೇ ಕಾರಣ ಅಲ್ಲ: ಸುಪ್ರೀಂ

ಪಿಟಿಐ
Published 8 ಸೆಪ್ಟೆಂಬರ್ 2021, 8:55 IST
Last Updated 8 ಸೆಪ್ಟೆಂಬರ್ 2021, 8:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ಸಂಭವಿಸಿದ ಸಾವುಗಳೆಲ್ಲ ವೈದ್ಯಕೀಯ ನಿರ್ಲಕ್ಷ್ಯದಿಂದಲೇ ಆಗಿವೆ’ ಎಂದು ನ್ಯಾಯಾಲಯಗಳು ಅಂದಾಜಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

ಇದೇ ವೇಳೆ, ವೈದ್ಯಕೀಯ ನಿರ್ಲಕ್ಷ್ಯದಿಂದ ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದು, ಇದಕ್ಕೆ ಪರಿಹಾರ ನೀಡಬೇಕೆಂದು ಕೋರಿ ದೀಪಕ್ ರಾಜ್ ಸಿಂಗ್‌ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ವಿಕ್ರಮ್ ನಾಥ್ ಮತ್ತು ಹಿಮಾ ಕೊಯ್ಲಿ ಅವರನ್ನೊಳಗೊಂಡ ಪೀಠ, ‘ಈ ಸಂಬಂಧ ನೀವು ಹೆಚ್ಚಿನ ಸಲಹೆಗಳಿಗಾಗಿ ಸಮರ್ಥ ಅಧಿಕಾರಿಗಳನ್ನು ಸಂಪರ್ಕಿಸಬಹುದು‘ ಎಂದು ಅರ್ಜಿದಾರ ದೀಪಕ್‌ ರಾಜ್‌ ಸಿಂಗ್‌ಗೆ ತಿಳಿಸಿತು.

ADVERTISEMENT

‘ಕೋವಿಡ್‌ನಿಂದ ಸಂಭವಿಸಿರುವ ಪ್ರತಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಹೇಳುವುದು ಅತಿರೇಕ ಎನ್ನಿಸುತ್ತದೆ. ಕೋವಿಡ್‌ ಎರಡನೇ ಅಲೆ ದೇಶದಾದ್ಯಂತ ತೀವ್ರ ಪರಿಣಾಮ ಬೀರಿದೆ. ಹಾಗೆಂದ ಮಾತ್ರಕ್ಕೆ, ನಿಮ್ಮ ಅರ್ಜಿಯಲ್ಲಿ ಮಾಡಿರುವ ಆರೋಪದಂತೆ ಈ ಸಮಯದಲ್ಲಿ ಕೋವಿಡ್‌ನಿಂದ ಸಂಭವಿಸಿದ ಸಾವುಗಳಿಗೆಲ್ಲ ವೈದ್ಯಕೀಯ ನಿರ್ಲಕ್ಷ್ಯ ಕಾರಣ ಎಂದು ಅಂದಾಜಿಸಲು ಸಾಧ್ಯವಿಲ್ಲ‘ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಇದೇ ವೇಳೆ ನ್ಯಾಯಪೀಠ, ಜೂ. 30ರ ತೀರ್ಪೊಂದನ್ನು ಉಲ್ಲೇಖಿಸಿದೆ. ಅದರಲ್ಲಿ, ‘ವ್ಯಕ್ತಿಯೊಬ್ಬ ಕೋವಿಡ್‌ನಿಂದ ಸಾವನ್ನಪ್ಪಿದ ಆರು ವಾರದೊಳಗೆ, ಮೃತ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ಪರಿಹಾರ (ಎಕ್ಸ್‌ಗ್ರೇಷಿಯಾ) ನೀಡುವಂತೆ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ.

‘ಈ ತೀರ್ಪಿನಲ್ಲಿ ನ್ಯಾಯಾಲಯವು ಮಾನವೀಯತೆಯ ದೃಷ್ಟಿಯಿಂದ ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲು ತಿಳಿಸಿದೆಯೇ ಹೊರತು, ವೈದ್ಯಕೀಯ ನಿರ್ಲಕ್ಷ್ಯಕ್ಕಾಗಿ ಅಲ್ಲ‘ ಎಂದು ನ್ಯಾಯಪೀಠ ಹೇಳಿದೆ. ಈ ವಿಚಾರವಾಗಿ ಸರ್ಕಾರ ಇನ್ನೂ ನೀತಿಯನ್ನು ರೂಪಿಸಬೇಕಾಗಿದೆ. ಈ ನೀತಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿಮ್ಮಲ್ಲಿ ಯಾವುದಾದರೂ‌ ಸಲಹೆಗಳಿದ್ದರೆ, ನೀವು ಸೂಕ್ತ ಪ್ರಾಧಿಕಾರವನ್ನು ಸಂಪರ್ಕಿಸಬಹುದು‘ ಎಂದು ನ್ಯಾಯಪೀಠ ಅರ್ಜಿದಾರರಿಗೆ ತಿಳಿಸಿದೆ.

ಅರ್ಜಿದಾರರ ಪರ ಹಾಜರಾದ ವಕೀಲ ಶ್ರೀರಾಮ್ ಪರಕಟ್, ‘ಈ ಅರ್ಜಿಯು ವಿಭಿನ್ನವಾಗಿದ್ದು, ಇದರಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಅಂಶಗಳನ್ನು ಉಲ್ಲೇಖಿಸುವ ಜೊತೆಗೆ, ಅಂತ ನಿರ್ಲಕ್ಷ್ಯದಿಂದಾದ ಸಾವಿಗೆ ಪರಿಹಾರವನ್ನು ಕೇಳಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

‘ಮೇ ತಿಂಗಳಲ್ಲಿ ಈ ಅರ್ಜಿ ಸಲ್ಲಿಕೆಯಾಗಿದ್ದು, ಅಲ್ಲಿಂದ ಈಚೆಗೆ ಸಾಕಷ್ಟು ಬೆಳವಣಿಗೆಗಳು ನಡೆದಿವೆ‘ ಎಂದು ನ್ಯಾಯಪೀಠ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.