ADVERTISEMENT

ಎಫ್‌ಐಆರ್‌ ವಿಳಂಬ: ಸಾಕ್ಷಿಗಳ ಸಮಗ್ರ ಪರಿಶೀಲನೆಗೆ ಸುಪ್ರೀಂ ಕೋರ್ಟ್ ಸೂಚನೆ

ಪಿಟಿಐ
Published 7 ಸೆಪ್ಟೆಂಬರ್ 2023, 13:13 IST
Last Updated 7 ಸೆಪ್ಟೆಂಬರ್ 2023, 13:13 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಯಾವುದೇ ಪ್ರಕರಣದಲ್ಲಿ ಪ್ರಥಮ ವರ್ತಮಾನ ವರದಿ ದಾಖಲಿಸಲು ವಿಳಂಬವಾಗಿರುವುದಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ ನೀಡುವ ವಿವರಣೆಯಲ್ಲಿ ಅಸತ್ಯತೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯಗಳು ಸಾಕ್ಷಿಗಳನ್ನು ಸಮಗ್ರವಾಗಿ ಪರಿಶೀಲಿಸಬೇಕಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

1989ರಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 1991ರ ಜುಲೈನಲ್ಲಿ ವಿಚಾರಣಾ ನ್ಯಾಯಾಲಯವು ಅಪರಾಧಿಗಳಾದ ಹರಿಲಾಲ್‌ ಹಾಗೂ ಪರಶ್ರಾಮ್ ಎಂಬುವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2010ರಲ್ಲಿ ಛತ್ತೀಸ್‌ಗಢ ಹೈಕೋರ್ಟ್‌ ಕೂಡ ಈ ತೀರ್ಪನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಈ ಇಬ್ಬರು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು. 

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ವಿಭಾಗೀಯ ನ್ಯಾಯಪೀಠವು, ಕೊಲೆ ನಡೆದ ಮಾರನೇ ದಿನ ಎಫ್‌ಐಆರ್‌ ದಾಖಲಿಸಿರುವುದನ್ನು ಗಮನಿಸಿತು.

ADVERTISEMENT

ಎಫ್‌ಐಆರ್‌ ವಿಳಂಬ ಕುರಿತು ಪ್ರಾಸಿಕ್ಯೂಷನ್‌ ಸೂಕ್ತ ವಿವರಣೆ ನೀಡದಿದ್ದಾಗ ನ್ಯಾಯಾಲಯಗಳು ಕಾವಲುಗಾರನ ಪಾತ್ರ ನಿರ್ವಹಿಸಬೇಕಾಗುತ್ತದೆ ಎಂದು ನ್ಯಾಯಪೀಠವು ಹೇಳಿತು.

ರಾತ್ರಿ ವೇಳೆ ಸಾರ್ವಜನಿಕ ಸ್ಥಳದಲ್ಲಿ ನಡೆದಿರುವ ಈ ಕೊಲೆಗೆ ಸಂಬಂಧಿಸಿದಂತೆ ಯಾರೊಬ್ಬರೂ ಪ್ರತ್ಯಕ್ಷದರ್ಶಿಗಳಿಲ್ಲ ಎಂದು ಹೇಳಿದ ನ್ಯಾಯಪೀಠವು, ಅಪರಾಧಿಗಳನ್ನು ಖುಲಾಸೆಗೊಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.