ADVERTISEMENT

ಜಾಮೀನು ನೀಡಲು ಎಲ್ಲ ಸಂದರ್ಭಗಳಲ್ಲಿ ಔದಾರ್ಯ ಬೇಡ: ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2024, 16:13 IST
Last Updated 30 ನವೆಂಬರ್ 2024, 16:13 IST
supreme-court-
supreme-court-   

ನವದೆಹಲಿ: ದೋಷಾರೋಪ ನಿಗದಿ ಆದ ತಕ್ಷಣ ಅಥವಾ ಸಂತ್ರಸ್ತರ ಮೌಖಿಕ ಸಾಕ್ಷ್ಯವನ್ನು ದಾಖಲಿಸಿಕೊಂಡ ನಂತರ ಆರೋಪಿಗೆ ಜಾಮೀನು ಮಂಜೂರು ಮಾಡುವುದು ಸರಿಯಾದ ಕ್ರಮ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅತ್ಯಾಚಾರ, ಕೊಲೆ, ದರೋಡೆಯಂತಹ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ವಿಚಾರಣೆ ಆರಂಭವಾಗಿ, ಪ್ರಾಸಿಕ್ಯೂಷನ್ ಪರ ವಕೀಲರು ಸಾಕ್ಷಿಗಳನ್ನು ಪರಿಶೀಲನೆಗೆ ಒಳಪಡಿಸಲು ಆರಂಭಿಸಿದ ನಂತರ, ಆರೋಪಿಗಳು ಸಲ್ಲಿಸುವ ಜಾಮೀನು ಅರ್ಜಿಗಳನ್ನು ಪುರಸ್ಕರಿಸುವಾಗ ವಿಚಾರಣಾ ನ್ಯಾಯಾಲಯಗಳು ಮತ್ತು ಹೈಕೋರ್ಟ್‌ಗಳು ಸಾಮಾನ್ಯ ಸಂದರ್ಭಗಳಲ್ಲಿ ಉದಾರಿಗಳಾಗಿ ಇರಬೇಕಿಲ್ಲ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರು ಇರುವ ವಿಭಾಗೀಯ ಪೀಠ ಹೇಳಿದೆ.

‘ವಿಚಾರಣೆ ಶುರುವಾದ ನಂತರ ಅದು ಅಂತಿಮ ಹಂತವನ್ನು ತಲುಪಲು ಅವಕಾಶ ಕೊಡಬೇಕು... ಸಂತ್ರಸ್ತರ ಹೇಳಿಕೆಗಳನ್ನು ಗಮನಿಸಿ ಹೈಕೋರ್ಟ್‌ ಆರೋಪಿಯ ಪರವಾಗಿ ತನ್ನ ವಿವೇಚನಾ ಅಧಿಕಾರವನ್ನು ಚಲಾಯಿಸಿ, ಆರೋಪಿಗೆ ಜಾಮೀನು ನೀಡಲು ಆದೇಶಿಸಿದರೆ, ವಿಚಾರಣೆಯ ಮೇಲೆ, ಸಂತ್ರಸ್ತ ವ್ಯಕ್ತಿಯ ಮೌಖಿಕ ಹೇಳಿಕೆಯನ್ನು ಪರಿಗಣಿಸುವುದರ ಮೇಲೆ ಅದು ತನ್ನದೇ ಆದ ಪರಿಣಾಮವನ್ನು ಉಂಟುಮಾಡುತ್ತದೆ’ ಎಂದು ಪೀಠವು ವಿವರಿಸಿದೆ.

ADVERTISEMENT

ವಿಚಾರಣೆಯು ಅನಗತ್ಯವಾಗಿ ವಿಳಂಬಗೊಂಡರೆ, ಆರೋಪಿಯ ಕಡೆಯಿಂದ ಯಾವುದೇ ತಪ್ಪು ಇಲ್ಲದಿದ್ದಾಗಲೂ ವಿಚಾರಣೆ ವಿಳಂಬ ಆದರೆ, ತ್ವರಿತ ವಿಚಾರಣೆಯ ಹಕ್ಕಿನ ಉಲ್ಲಂಘನೆ ಆಗಿದೆ ಎಂದು ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದಕ್ಕೆ ಆದೇಶ ಹೊರಡಿಸುವುದನ್ನು ಸಮರ್ಥಿಸಬಹುದು ಎಂದು ಹೇಳಿದೆ.

ಎರಡು ಸಂಗತಿಗಳನ್ನು ಕೆಲವು ಸಮಯದಿಂದ ತಾನು ಗಮನಿಸಿರುವುದಾಗಿ ಪೀಠ ಹೇಳಿದೆ. ದೋಷಾರೋಪ ನಿಗದಿ ಆದ ನಂತರ, ವಿಚಾರಣಾ ನ್ಯಾಯಾಲಯದ ಮುಂದೆ ಸಂತ್ರಸ್ತ ವ್ಯಕ್ತಿಯನ್ನು ಪ್ರಾಸಿಕ್ಯೂಷನ್ ಪರ ವಕೀಲರು ಪರಿಶೀಲನೆಗೆ ಗುರಿಪಡಿಸುವ ಮೊದಲು ಜಾಮೀನು ಮಂಜೂರು ಮಾಡಲಾಗುತ್ತದೆ ಅಥವಾ ಸಂತ್ರಸ್ತ ವ್ಯಕ್ತಿಯ ಹೇಳಿಕೆಯಲ್ಲಿ ಒಂದೆರಡು ಲೋಪಗಳನ್ನು ಗುರುತಿಸಿ, ಸಂತ್ರಸ್ತ ವ್ಯಕ್ತಿ ಮೌಖಿಕ ಹೇಳಿಕೆ ನೀಡಿದ ತಕ್ಷಣವೇ ಜಾಮೀನು ನೀಡಲಾಗುತ್ತಿದೆ. ‘ನಮ್ಮ ಪ್ರಕಾರ, ಇದು ಅಧೀನ ನ್ಯಾಯಾಲಯಗಳು ಪಾಲಿಸಬೇಕಿರುವ ಸರಿಯಾದ ಕ್ರಮ ಅಲ್ಲ’ ಎಂದು ಪೀಠವು ಸ್ಪಷ್ಟಪಡಿಸಿದೆ.

ಸಾಮೂಹಿಕ ಅತ್ಯಾಚಾರ ಪ್ರಕರಣವೊಂದರ ಸಹ ಆರೋಪಿಗಳಲ್ಲಿ ಒಬ್ಬನಿಗೆ ರಾಜಸ್ಥಾನ ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠವು ಈ ಮಾತು ಹೇಳಿದೆ. ಎಫ್‌ಐಆರ್‌ ಹಾಗೂ ಅಪರಾಧ ದಂಡಪ್ರಕ್ರಿಯಾ ಸಂಹಿತೆಯ ಸೆಕ್ಷನ್ 164ರ ಅಡಿಯಲ್ಲಿ ನೀಡಿದ ಹೇಳಿಕೆಗಳ ನಡುವೆ ವ್ಯತ್ಯಾಸ ಇರುವುದನ್ನು ಪರಿಗಣಿಸಿ ಹೈಕೋರ್ಟ್ ಜಾಮೀನು ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.