ADVERTISEMENT

ಡೆಲ್ಟಾ ರೂಪಾಂತರ ವಿರುದ್ಧ ಕೋವ್ಯಾಕ್ಸಿನ್ ಶೇ 50ರಷ್ಟು ಪರಿಣಾಮಕಾರಿ: ಅಧ್ಯಯನ ವರದಿ

ಪಿಟಿಐ
Published 24 ನವೆಂಬರ್ 2021, 5:49 IST
Last Updated 24 ನವೆಂಬರ್ 2021, 5:49 IST
ಸಾಂದರ್ಭಿಕ ಚಿತ್ರ – ಪಿಟಿಐ
ಸಾಂದರ್ಭಿಕ ಚಿತ್ರ – ಪಿಟಿಐ   

ನವದೆಹಲಿ: ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರದ ವಿರುದ್ಧ ಕೋವ್ಯಾಕ್ಸಿನ್‌ ಲಸಿಕೆಯ ಎರಡು ಡೋಸ್‌ಗಳು ಶೇ 50ರಷ್ಟು ಪರಿಣಾಮಕಾರಿ ಎಂದು ಅಧ್ಯಯನ ವರದಿ ತಿಳಿಸಿದೆ. ವರದಿಯು ‘ದಿ ಲ್ಯಾನ್ಸೆಟ್ ಇನ್‌ಫೆಕ್ಷಿಯಸ್ ಡಿಸೀಸ್ ಜರ್ನಲ್‌’ನಲ್ಲಿ ಪ್ರಕಟಗೊಂಡಿದೆ.

ಕೋವ್ಯಾಕ್ಸಿನ್ ಎರಡು ಡೋಸ್‌ಗಳ ಪರಿಣಾಮಕಾರಿತ್ವ ಶೇ 77.8ರಷ್ಟಿದೆ. ಲಸಿಕೆಯ ಸುರಕ್ಷತೆ ಬಗ್ಗೆ ಯಾವುದೇ ಆತಂಕವಿಲ್ಲ ಎಂದು ‘ಲ್ಯಾನ್ಸೆಟ್’ ಮಧ್ಯಂತರ ವರದಿಯಲ್ಲಿ ಇತ್ತೀಚೆಗೆ ಉಲ್ಲೇಖಿಸಲಾಗಿತ್ತು.

ದೆಹಲಿಯ ಏಮ್ಸ್ ಆಸ್ಪತ್ರೆಯ 2,714 ಸಿಬ್ಬಂದಿಯನ್ನು ಏಪ್ರಿಲ್ 15ರಿಂದ ಮೇ 15ರ ವರೆಗಿನ ಅವಧಿಯಲ್ಲಿ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು.

ADVERTISEMENT

ಅಧ್ಯಯನದ ಸಂದರ್ಭದಲ್ಲಿ ಡೆಲ್ಟಾ ರೂಪಾಂತರವು ಭಾರತದಲ್ಲಿ ಪ್ರಬಲವಾಗಿತ್ತು. ಆ ಸಂದರ್ಭದಲ್ಲಿ ದೇಶದಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳ ಪೈಕಿ ಶೇ 80ರಷ್ಟು ಡೆಲ್ಟಾ ರೂಪಾಂತರ ಸಂಬಂಧಿತ ಪ್ರಕರಣಗಳಾಗಿದ್ದವು ಎಂದು ಸಂಶೋಧಕರು ತಿಳಿಸಿದ್ದಾರೆ.

ಹೈದರಾಬಾದ್‌ನ ಭಾರತ್ ಬಯೋಟೆಕ್ ಕಂಪನಿಯು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗಳ ಸಹಯೋಗದೊಂದಿಗೆ ಕೋವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಪಡಿಸಿತ್ತು. ಜನವರಿಯಲ್ಲಿ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೂಡ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿತ್ತು. ಇದರೊಂದಿಗೆ, ಲಸಿಕೆಗೆ ಜಾಗತಿಕ ಮಾನ್ಯತೆ ದೊರೆತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.