ADVERTISEMENT

ತೆಲಂಗಾಣದಲ್ಲಿ ಕೋವಿಡ್‌ ಸೋಂಕಿಗೆ ಹೆದರಿದ ಮಾವೋವಾದಿ ದಂಪತಿ ಪೊಲೀಸರಿಗೆ ಶರಣು!

ಪಿಟಿಐ
Published 26 ಜೂನ್ 2021, 15:47 IST
Last Updated 26 ಜೂನ್ 2021, 15:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್‌:ಕೊರೊನಾ ಸೋಂಕಿಗೆ ಹೆದರಿ ಸಕ್ರಿಯ ಮಾವೋವಾದಿ ದಂಪತಿಯೊಂದು ಪೊಲೀಸರಿಗೆ ಶರಣಾಗಿರುವ ಪ್ರಸಂಗ ತೆಲಂಗಾಣದ ಭದ್ರಾದ್ರಿ ಕೋಟಗುಡೆಂ ಜಿಲ್ಲೆಯ ಪೊಲೀಸ್‌ ಠಾಣೆಯಲ್ಲಿ ನಡೆದಿದೆ.

ಮಾವೋವಾದಿ ಪಡೆಯ ಮನುಗುರು ಲೋಕಲ್‌ ಆರ್ಗನೈಸೇಷನ್‌ ಸ್ಕ್ವಾಡ್‌ ಸಮಿತಿಯ ಸದಸ್ಯ ಸುರೇಂದರ್‌ ಮತ್ತು ಆತನ ಪತ್ನಿ ಶರಣಾಗತರಾಗಿದ್ದಾರೆ ಎಂದು ಭದ್ರಾದ್ರಿ ಕೋಟಗುಡೆಂ ಪೊಲೀಸರು ತಿಳಿಸಿದ್ದಾರೆ.

ಇಬ್ಬರಿಗೂ 23 ವರ್ಷ ವಯಸ್ಸಾಗಿದ್ದು, ಕೊರೊನಾ ಸೋಂಕಿಗೆ ಒಳಪಟ್ಟಿರುವುದರಿಂದ ಮಾವೋವಾದಿ ತಂಡದ ನಾಯಕತ್ವ ತಮ್ಮನ್ನು ಹೀನಾಯವಾಗಿ ಕಾಣಬಹುದು, ಹಿಂಸೆ ನೀಡಬಹುದು ಎಂದು ಹೆದರಿ ನಿಷೇಧಿತ ಸಿಪಿಐ(ಮಾವೋವಾದಿ) ಪಕ್ಷವನ್ನು ತೊರೆದಿದ್ದಾಗಿ ದಂಪತಿ ಹೇಳಿದ್ದಾರೆ.

ADVERTISEMENT

ಮಾವೋವಾದಿ ತಂಡದಲ್ಲಿ ಇತ್ತೀಚೆಗೆ ಕೇಂದ್ರ ಸಮಿತಿ ಸದಸ್ಯ ಹರಿ ಭೂಷಣ್‌ ಸೇರಿ ಕೆಲವರು ಕೋವಿಡ್‌ 19ರಿಂದ ಮೃತಪಟ್ಟಿದ್ದರು. ಇದರಿಂದ ಮಾವೋ ಪಡೆಗೆ ಕೊರೊನಾ ಭೀತಿ ಹೆಚ್ಚಿತ್ತು. ಸೋಂಕು ಹರಡುವ ಹಿನ್ನೆಲೆ ತಂಡದ ಸದಸ್ಯರು ತಮ್ಮನ್ನು ನಿರ್ಲಕ್ಷಿಸುತ್ತಾರೆ ಎಂಬ ಭೀತಿಯಲ್ಲಿ ಇಬ್ಬರು ಶರಣಾಗಿರುವುದಾಗಿ ಕೋಟಗುಡೆಂ ಪೊಲೀಸ್‌ ಸುಪರಿಟೆಂಡೆಂಟ್‌ ಸುನೀಲ್‌ ದತ್‌ ತಿಳಿಸಿದ್ದಾರೆ.

ಶರಣಾಗತರಾಗಿರುವ ಇಬ್ಬರಿಗೂ ಕೋವಿಡ್‌ ಚಿಕಿತ್ಸೆಗೆ ಏರ್ಪಾಡು ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಇಬ್ಬರಿಗೂ ಪುನರ್ವಸತಿ ಕಲ್ಪಿಸುವುದಾಗಿಯೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.