ADVERTISEMENT

ಕೋವಿಡ್-19: ಕಳೆದ ಐದು ದಿನಗಳಲ್ಲಿ ಗುಣಮುಖರಾದವರ ಸಂಖ್ಯೆಯೇ ಹೆಚ್ಚು

ಏಜೆನ್ಸೀಸ್
Published 23 ಸೆಪ್ಟೆಂಬರ್ 2020, 8:40 IST
Last Updated 23 ಸೆಪ್ಟೆಂಬರ್ 2020, 8:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಾದ್ಯಂತ ಕಳೆದ ಐದು ದಿನಗಳಲ್ಲಿ ದಾಖಲಾದ ಹೊಸ ಕೊರೊನಾ ಪ್ರಕರಣಗಳಿಗಿಂತಲೂ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಸೆಪ್ಟೆಂಬರ್ 19ರಂದು ದೇಶದಲ್ಲಿ ದಿನವೊಂದರ ಗರಿಷ್ಠ, ಅಂದರೆ 93,337 ಹೊಸ ಪ್ರಕರಣಗಳು ದೃಢಪಟ್ಟಿದ್ದವು. ಅದೇ ದಿನ ದೇಶದಾದ್ಯಂತ 95,880 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೆಪ್ಟೆಂಬರ್ 20ರಂದು 92,605 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 94,612 ಜನ ಗುಣಮುಖರಾಗಿದ್ದಾರೆ. ಸೆಪ್ಟೆಂಬರ್ 21ರಂದು 86,961 ಪ್ರಕರಣ ದೃಢಪಟ್ಟಿದ್ದು, 93,356 ಜನ ಗುಣಮುಖರಾಗಿದ್ದಾರೆ. 22ರಂದು 75,083 ಪ್ರಕರಣಗಳು ಪತ್ತೆಯಾಗಿದ್ದು, ದಿನವೊಂದರ ಗರಿಷ್ಠ ಮಂದಿ (1,01, 468) ಚೇತರಿಸಿಕೊಂಡಿದ್ದಾರೆ. ಸೆಪ್ಟೆಂಬರ್ 23ರಂದು, ಅಂದರೆ ಇಂದು 83,347 ಹೊಸ ಪ್ರಕರಣಗಳು ಪತ್ತೆಯಾಗಿವೆ. 89,746 ಸೋಂಕಿತರು ಗುಣಮುಖರಾಗಿದ್ದಾರೆ.

ಇದರೊಂದಿಗೆ ಈವರೆಗೆ ದೇಶದಾದ್ಯಂತ 45,87,613 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ಚೇತರಿಕೆ ಪ್ರಮಾಣ ಶೇ 81.25ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಚೇತರಿಕೆ ಪ್ರಮಾಣ ಹೊಂದಿದೆ. ಜಾಗತಿಕ ಚೇತರಿಕೆ ಪ್ರಮಾಣದಲ್ಲಿ ಶೇ 19.5ರಷ್ಟು ಭಾರತದ ಪಾಲಿದೆ ಎಂದೂ ಸಚಿವಾಲಯ ಹೇಳಿದೆ.

ಬುಧವಾರ ಬೆಳಗ್ಗಿನ ವರದಿ ಪ್ರಕಾರ, ದೇಶದಾದ್ಯಂತ ಈವರೆಗೆ 56,46,011 ಮಂದಿಗೆ ಸೋಂಕು ತಗುಲಿದ್ದು, 90,020 ಮಂದಿ ಅಸುನೀಗಿದ್ದಾರೆ. 45,87,614 ಮಂದಿ ಗುಣಮುಖರಾಗಿದ್ದಾರೆ. ಸದ್ಯ 9,68,377 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.