ADVERTISEMENT

Covid-19 India Update | 2.66 ಲಕ್ಷ ಜನರಿಗೆ ಸೋಂಕು; 1.29 ಮಂದಿ ಗುಣಮುಖ

ಪಿಟಿಐ
Published 9 ಜೂನ್ 2020, 17:19 IST
Last Updated 9 ಜೂನ್ 2020, 17:19 IST
ಕೋವಿಡ್ ತಪಾಸಣೆಗಾಗಿ ಮಗುವಿನ ಗಂಟಲುದ್ರವದ ಮಾದರಿ ಸಂಗ್ರಹಿಸಿದ ವೈದ್ಯಕೀಯ ಸಿಬ್ಬಂದಿ –ಪಿಟಿಐ ಚಿತ್ರ
ಕೋವಿಡ್ ತಪಾಸಣೆಗಾಗಿ ಮಗುವಿನ ಗಂಟಲುದ್ರವದ ಮಾದರಿ ಸಂಗ್ರಹಿಸಿದ ವೈದ್ಯಕೀಯ ಸಿಬ್ಬಂದಿ –ಪಿಟಿಐ ಚಿತ್ರ   

ನವದೆಹಲಿ:ದೇಶದಲ್ಲಿ ಒಟ್ಟು ಕೋವಿಡ್–19ಪ್ರಕರಣಗಳ ಸಂಖ್ಯೆ ಮಂಗಳವಾರ ಬೆಳಿಗ್ಗೆ ವೇಳೆಗೆ 2.66 ಲಕ್ಷವನ್ನು ದಾಟಿದೆ. ಪ್ರತಿದಿನ ಪತ್ತೆಯಾಗುವ ಹೊಸ ಪ್ರಕರಣಗಳ ಸಂಖ್ಯೆ ಸತತ ಏಳನೇ ದಿನವೂ 9 ಸಾವಿರವನ್ನು ದಾಟಿದೆ. ಆದರೆ, ‘ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಸ್ಥಿತಿ ಉತ್ತಮವಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ಮಂಗಳವಾರ ಬೆಳಿಗ್ಗೆ 8ರ ವೇಳೆಗೆ ದೇಶದಲ್ಲಿ ಪತ್ತೆಯಾದ ಕೋವಿಡ್–19 ಪ್ರಕರಣಗಳ ಒಟ್ಟು ಸಂಖ್ಯೆ2,66,598ಕ್ಕೆ ತಲುಪಿತ್ತು. ಕೋವಿಡ್–19‌ನಿಂದ ಸತ್ತವರ ಸಂಖ್ಯೆ 7,466 ಆಗಿತ್ತು. ಒಟ್ಟು ಪ್ರಕರಣಗಳಲ್ಲಿ1,29,917 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ. 1,29,214 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಕೋವಿಡ್–19 ಹರಡುವಿಕೆ ತಡೆಯಲು ಕೇಂದ್ರ ಸರ್ಕಾರವು ಹೇರಿದ್ದ 75 ದಿನಗಳ ಲಾಕ್‌ಡೌನ್‌ ಅನ್ನು ಬಹುಪಾಲು ಸಡಿಲಿಕೆ ಮಾಡಿರುವ ಸಂದರ್ಭದಲ್ಲೇ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ದೇಶದ ಹಲವು ನಗರಗಳಲ್ಲಿ ಸೋಂಕು ಸಮುದಾಯಕ್ಕೆ ಹರಡಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ರಾಜ್ಯಗಳಿಗೆ ಕೇಂದ್ರದ ತಂಡ:ಕೋವಿಡ್–19 ಸೋಂಕು ವ್ಯಾಪಕವಾಗಿ ಹರಡಿರುವ ದೇಶದ 15 ರಾಜ್ಯಗಳ 50 ಜಿಲ್ಲೆಗಳಿಗೆ ಕೇಂದ್ರ ಸರ್ಕಾರವು ತಜ್ಞರ ತಂಡವನ್ನು ಕಳುಹಿಸಿದೆ. ಈ ನಗರಗಳಲ್ಲಿ ಮನೆ–ಮನೆ ಸಮೀಕ್ಷೆ ನಡೆಸಲು, ಕ್ವಾರಂಟೈನ್ ಮತ್ತು ಕೋವಿಡ್–19 ಚಿಕಿತ್ಸೆ ಮೇಲೆ ನಿಗಾ ಇಡುವಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರದ ತಂಡವು ನೆರವು ನೀಡಲಿದೆ. ಕರ್ನಾಟಕದ 4 ಜಿಲ್ಲೆಗಳಿಗೆ ಕೇಂದ್ರ ತಂಡವನ್ನುನಿಯೋಜನೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.

‘ವಿಶ್ವದ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸೋಂಕು ನಿಯಂತ್ರಣದಲ್ಲಿ ಇದೆ. ಆದರೆ ನಾವು ಇಷ್ಟಕ್ಕೇ ತೃಪ್ತಿಪಡುವಂತಿಲ್ಲ. ಸೋಂಕು ಮತ್ತಷ್ಟು ಹರಡುವ ಅಪಾಯವಿದೆ. ಹೀಗಾಗಿ ಅಂತರ ಕಾಯ್ದುಕೊಳ್ಳುವುದು, ಸಾನಿಟೈಸರ್ ಬಳಸುವುದು ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವುದನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಅವರು ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.